ವಾಯುಪಡೆ ನೇಮಕಾತಿ ಪರೀಕ್ಷೆಯಲ್ಲಿ ವೈಶಾಲಿ ರಾಜ್ಯಕ್ಕೆ ಫಸ್ಟ್

KannadaprabhaNewsNetwork |  
Published : Nov 30, 2026, 04:15 AM IST
29ಸದ್ಚಬಸದಕಬಸದಕಚ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಖಾನಾಪುರತಾಲೂಕಿನ ಚಣಕೆಬೈಲ ಗ್ರಾಮದ ವೈಶಾಲಿ ಗಣಪತಿ ಜಾಧವ (19) ಯುವತಿ ಭಾರತೀಯ ವಾಯುಪಡೆಯ ಜಿ.ಡಿ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಚಣಕೆಬೈಲ ಗ್ರಾಮದ ವೈಶಾಲಿ ಗಣಪತಿ ಜಾಧವ (19) ಯುವತಿ ಭಾರತೀಯ ವಾಯುಪಡೆಯ ಜಿ.ಡಿ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾಳೆ.

ಚಣಕೆಬೈಲ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ ಜನಿಸಿರುವ ವೈಶಾಲಿ ಪಿಯು ಶಿಕ್ಷಣ ಬಳಿಕ ಸೇನೆಗೆ ಸೇರುವ ಬಯಕೆಯೊಂದಿಗೆ ವಿವಿಧೆಡೆ ಅರ್ಜಿ ಸಲ್ಲಿಸಿದ್ದಳು. ಈಗಾಗಲೇ ವಾಯುಸೇನೆ, ಭೂಸೇನೆ, ನೌಕಾದಳ, ಬಿ.ಎಸ್.ಎಫ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಫಲಿತಾಂಶಕ್ಕೆ ಕಾಯುತ್ತಿದ್ದಳು. ಶನಿವಾರ ವಾಯುಪಡೆ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವೈಶಾಲಿ ಆಯ್ಕೆಯಾಗಿದ್ದರಿಂದ ಚಣಕೇಬೈಲ ಗ್ರಾಮಸ್ಥರು ಮತ್ತು ವೈಶಾಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತೆಯರು ವೈಶಾಲಿಯನ್ನು ಸತ್ಕರಿಸಿ ಮೈಮೇಲೆ ಹೊತ್ತು ಕುಣಿದು-ಕುಪ್ಪಳಿಸಿದರು.

ತನ್ನ ಸಾಧನೆಯ ಕುರಿತು ಪತ್ರಿಕೆಯೊಂದಿಗೆ ಖುಷಿ ಹಂಚಿಕೊಂಡ ವೈಶಾಲಿ, ಸತತ ಪರಿಶ್ರಮ ಮತ್ತು ಧೃಡ ಸಂಕಲ್ಪ ನನ್ನ ಸಾಧನೆಗೆ ಪ್ರಮುಖ ಕಾರಣ. ಸೇನೆ ಸೇರಿ ದೇಶಸೇವೆ ಮಾಡಬೇಕೆಂಬ ಇಚ್ಛೆಗೆ ಹೆತ್ತವರು ಪ್ರೋತ್ಸಾಹ ಮತ್ತು ಸಹಕಾರ ನೀಡಿದ್ದರಿಂದ ಇಂದು ಈ ಮೆಟ್ಟಿಲು ಏರಲು ಸಾಧ್ಯವಾಗಿದೆ. ಅಕ್ಟೋಬರ್-ನವಂಬರ್ ನಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ನಡೆಸಿದ ಲಿಖಿತ, ಸ್ಪರ್ಧಾತ್ಮಕ, ದೈಹಿಕ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ಸೇರಿ ನೇಮಕಾತಿ ಪರೀಕ್ಷೆಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದೆ. ಶನಿವಾರ ಪ್ರಕಟಗೊಂಡ ಅಂತಿಮ ಹಂತದ ಫಲಿತಾಂಶದಲ್ಲಿ ಉತ್ತಮ ಅಂಕಗಳೊಂದಿಗೆ ವಾಯುಸೇನೆಗೆ ನೇಮಕಗೊಂಡಿರುವುದು ತಿಳಿದು ಖುಷಿಯಾಗಿದೆ. ಬೀಡಿ ಗ್ರಾಮದ ಭಗತಸಿಂಗ್ ಕೆರಿಯರ್ ಅಕಾಡೆಮಿಯಲ್ಲಿ ಸತತ 6 ತಿಂಗಳ ತರಬೇತಿ ಪಡೆದಿದ್ದು, ತರಬೇತಿ ಸಂದರ್ಭದಲ್ಲಿ ಕಲಿತ ಸಂಗತಿಗಳು ತನಗೆ ಧೈರ್ಯದಿಂದ ಪರೀಕ್ಷೆ ಎದುರಿಸಲು ನೆರವಾಯಿತು ಎಂದು ವಿವರಿಸಿದಳು. ಈ ಸಂದರ್ಭದಲ್ಲಿ ವೈಶಾಲಿ ಹೆತ್ತವರು, ಕುಟುಂಬದ ಸದಸ್ಯರು, ಗ್ರಾಮಸ್ಥರು ಮತ್ತು ಮಾಜಿ ಸೈನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ