ಕೋಟ್ಯಂತರ ಯುವಕರಿಗೆ ವಾಜಪೇಯಿ ಆದರ್ಶಪ್ರಾಯ: ಸಂಸದ ಡಾ.ಕೆ. ಸುಧಾಕರ್

KannadaprabhaNewsNetwork |  
Published : Dec 26, 2025, 01:00 AM IST
 ಸಿಕೆಬಿ-6  ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ 101 ನೇ ಜನ್ಮ ದಿನಾಚರಣೆ ಪ್ರಯುಕ್ತ  ಸುಶಾಸನ ದಿವಸ್ ಕಾರ್ಯಕ್ರಮದಲ್ಲಿ ಹಿರಿಯರಾದ ಪತ್ರಕರ್ತ ರೂಪಸಿ ರಮೇಶ್,ನಿವೃತ್ತ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ ಮತ್ತು ಸಂಘಪರಿವಾರದ ಲಕ್ಷ್ಮೀನಾರಾಯಣಗುಪ್ತರನ್ನು ಸಂಸದ ಡಾ.ಕೆ.ಸುಧಾಕರ್  ಸನ್ಮಾನಿಸಿದರು. | Kannada Prabha

ಸಾರಾಂಶ

ಇದೇ ವೇಳೆ ಪಕ್ಷಕ್ಕಾಗಿ ದುಡಿದ ಹಿರಿಯರಾದ ಪತ್ರಕರ್ತ ರೂಪಸಿ ರಮೇಶ್, ನಿವೃತ್ತ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ ಮತ್ತು ಸಂಘ ಪರಿವಾರದ ಲಕ್ಷ್ಮೀನಾರಾಯಣಗುಪ್ತರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಪ್ಪಟ ಕವಿ ಹೃದಯಿ, ಮುತ್ಸದ್ಧಿ, ದೇಶಪ್ರೇಮಿ, ಅಜಾತ ಶತ್ರು, ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜೀವನ ನಮ್ಮಂತಹ ಕೋಟ್ಯಾಂತರ ಯುವ ಜನತೆಗೆ ಆದರ್ಶ ಮತ್ತು ಮಾರ್ಗದರ್ಶನವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ನಡೆದ ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮ ದಿನಾಚರಣೆ ಪ್ರಯುಕ್ತ ಸುಶಾಸನ ದಿವಸ್ ಕಾರ್ಯಕ್ರಮ ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಟಲ್‌ಜೀ ಅವರ ಜನ್ಮದಿನವನ್ನು ‘ಸುಶಾಸನ ದಿವಸ’ವನ್ನಾಗಿ ಆಚರಿಸಲಾಗುತ್ತಿದೆ. ಅವರ ಆದರ್ಶ ವ್ಯಕ್ತಿತ್ವ, ಸಹೃದಯತೆಯ ರಾಜಕಾರಣ, ಸಮಾಜಮುಖಿ ಅಭಿವೃದ್ಧಿ ಕಾರ್ಯಗಳು, ರಾಷ್ಟ್ರಭಕ್ತಿ ಸಾಕ್ಷೀಕರಿಸುವ ಐತಿಹಾಸಿಕ ಹೋರಾಟಗಳನ್ನು ನೆನೆದು ಈ ದಿನವನ್ನು ಸಾರ್ಥಕಗೊಳಿಸಬೇಕೆಂಬುದು ಅಟಲ್‌ಜೀ ಅವರ ಕೋಟಿ ಕೋಟಿ ಅಭಿಮಾನಿಗಳ ಸಂಕಲ್ಪವಾಗಿದೆ. ಭಾರತೀಯ ಜನತಾ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಕೈಂಕರ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅಟಲ್‌ಜೀ ಅವರನ್ನು ನೆನಪಿಸುವುದು, ಅವರ ವ್ಯಕ್ತಿತ್ವ, ಸಾಧನೆ, ಕೊಡುಗೆಗಳನ್ನು ಸ್ಮರಿಸುವ ಕಾರ್ಯಕ್ರಮಗಳು ದೇಶಾದ್ಯಂತ ಜನರನ್ನು ತಲುಪಲಿವೆ ಎಂದು ಹೇಳಿದರು.

ಸುಶಾಸನ ದಿವಸ ಆಚರಿಸಬೇಕೆಂದು ಸಂಕಲ್ಪಿಸಿ, ಪ್ರೇರಣೆ ನೀಡಿದವರು ಪ್ರಧಾನಿ ನರೇಂದ್ರ ಮೋದಿಯವರು. ಅಟಲ್‌ಜೀ ಅವರ ಅನೇಕ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಕನಸು ನನಸು ಮಾಡುವ ನಿಟ್ಟಿನಲ್ಲಿ ‘ವಿಕಸಿತ ಭಾರತ’ ನಿರ್ಮಾಣದ ಹಾದಿಯಲ್ಲಿ ಮೋದಿಯವರು ದಾಪುಗಾಲಿಟ್ಟಿದ್ದಾರೆ ಎಂದರು.

ಸಂಘ ಸಂಸ್ಕಾರದ ನೆರಳಿನಲ್ಲಿ, ಸಂಘಟನೆಯ ಜವಾಬ್ದಾರಿ ಹೊರುವ ಮತ್ತು ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಅವರ ಆದರ್ಶ ರಾಜಕಾರಣ ನನಗೆ ನಿರಂತರ ಪ್ರೇರಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸ್ಥಿರವಾಗಿ ನೆಲೆಯೂರಲು ಆರಂಭಿಸಿದ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಿಗೆ ಅಟಲ್‌ಜೀ ಅವರು ಅತ್ಯಂತ ಚೈತನ್ಯ ಸ್ವರೂಪಿ ಶಕ್ತಿಯಾಗಿದ್ದರು. ಇಂದು ಪಕ್ಷ ಭದ್ರವಾಗಿ ನೆಲೆಯೂರಿದ್ದರೆ, ಬಿಜೆಪಿ ಆಡಳಿತದ ಯುಗ ಆರಂಭವಾಗಲು ಪ್ರೇರಣೆ ಶಕ್ತಿಯಾಗಿ ಆ ದಿನಗಳಲ್ಲಿ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತವರು ಅಟಲ್‌ಜೀ ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿ ಅವರ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆನೆದರು.

ಅಟಲ್‌ಜೀ ಅವರು ತಂದ ಅನೇಕ ಸುಧಾರಣಾ ನೀತಿ ಹಾಗೂ ಕಾರ್ಯಕ್ರಮಗಳು ಭಾರತದ ಬೆಳವಣಿಗೆಗೆ ಮೈಲುಗಲ್ಲುಗಳಾದವು. ಇಂದು ಭಾರತ ಬಲಿಷ್ಠವಾಗಿ ನಿಂತು, ಜಾಗತಿಕವಾಗಿ ಅಗ್ರಸ್ಥಾನ ಪಡೆದಿದ್ದರೆ ಅದು ಅಟಲ್‌ಜೀ ಅವರು ದೇಶಕಟ್ಟಲು ಹಾಕಿದ ಭದ್ರ ಬುನಾದಿಯ ತಳಹದಿಯ ಪ್ರತಿಫಲ ಎನ್ನುವುದನ್ನು ಸ್ವತಃ ಮೋದಿ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆಂದು ಹೇಳಿದರು.

ಇದೇ ವೇಳೆ ಪಕ್ಷಕ್ಕಾಗಿ ದುಡಿದ ಹಿರಿಯರಾದ ಪತ್ರಕರ್ತ ರೂಪಸಿ ರಮೇಶ್, ನಿವೃತ್ತ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ ಮತ್ತು ಸಂಘ ಪರಿವಾರದ ಲಕ್ಷ್ಮೀನಾರಾಯಣಗುಪ್ತರನ್ನು ಸನ್ಮಾನಿಸಲಾಯಿತು.

ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ,ಮುಖಂಡರಾದ ಸೀಕಲ್ಆನಂದಗೌಡ, ಆವುಲಕೊಂಡರಾಯಪ್ಪ, ರಾಜಶೇಖರ್, ಚನ್ನಕೃಷ್ಣಾರೆಡ್ಡಿ, ಚನ್ನಪ್ಪರೆಡ್ಡಿ, ಅರುಣ್ ಬಾಬು, ಲೀಲಾವತಿ ಶ್ರೀನಿವಾಸ್, ಕೃಷ್ಣಮೂರ್ತಿ,ಮುರಳೀಧರ್, ಅಶೋಕ್ ಕುಮಾರ್,ಮಧುಚಂದ್ರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ