)
ರಾಮನಗರ: ಬಹುವರ್ಷಗಳ ಬೇಡಿಕೆಯಂತೆ ರಾಮನಗರಕ್ಕೆ ಬಿಎಂಟಿಸಿ ಬಸ್ ಸಂಚಾರ ವಿಸ್ತರಿಸಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ “ವಜ್ರ ವಿಸ್ತಾರ” ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25 ಕಿ.ಮೀ ವರೆಗೆ ಇದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಾರ್ಯಾಚರಣೆ ವ್ಯಾಪ್ತಿಯನ್ನು ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಠಿಯಿಂದ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40 ಕಿ.ಮೀ.ವರೆಗೆ ವಿಸ್ತರಿಸಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅವಶ್ಯಕವಿರುವ ಬಸ್‌ಗಳ ಮಾರ್ಗದ ಪಟ್ಟಿ ನೀಡಿದರೆ ಶಾಲಾ ಸಮಯಗಳಲ್ಲಿ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗುವುದು ಹಾಗೂ ರಾಮನಗರ ಹಾಗೂ ಹಾರೋಹಳ್ಳಿ ಬಸ್ ನಿಲ್ದಾಣ ಕಾಮಗಾರಿಗೆ ಅವಶ್ಯವಿರುವ ಜಾಗಗಳನ್ನು ಗುರುತಿಸಿ, ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಶೀಘ್ರವಾಗಿ ಬಸ್ ನಿಲ್ದಾಣಗಳ ಕಾಮಗಾರಿ ಆರಂಭಿಸಲಾಗುವುದು ಎಂದರು.
ಬೆಂಗಳೂರು ನಗರದ ಸುತ್ತಮುತ್ತಲಿರುವ ಪ್ರಮುಖ ಪಟ್ಟಣ ಪ್ರದೇಶಗಳಾದ ಅತ್ತಿಬೆಲೆ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸಪೇಟೆ, ಬಿಡದಿ, ಹಾರೋಹಳ್ಳಿ ಹಾಗೂ ಹೊಸಕೋಟೆಗೆ ಒಟ್ಟು 11 ಮಾರ್ಗಗಳಲ್ಲಿ 124 ಅನುಸೂಚಿಗಳನ್ನು ವೇಗದೂತ ತಡೆ ರಹಿತವಾಗಿ ಆಚರಣೆಗೊಳಿಸುತ್ತಿದ್ದು, ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣಿಕರು, ಈ ಸಾರಿಗೆ ಸೌಲಭ್ಯ ಪಡೆಯುತ್ತಿದ್ದು, ಪ್ರತಿದಿನ ಸರಾಸರಿ 18 ಲಕ್ಷ ರು.ಗಳು ಸಾರಿಗೆ ಆದಾಯ ಬರುತ್ತಿದೆ ಎಂದರು.ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ರಾಮನಗರ ಹಾಗೂ ಹಾರೋಹಳ್ಳಿಯಲ್ಲಿ ಬಸ್ ನಿಲ್ದಾಣಗಳು ಕಿರಿದಾಗಿದ್ದು, ಬಸ್‌ಸೇವೆ ವಿಸ್ತರಿಸಿರುವುದರಿಂದ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವಂತೆ ಹಾಗೂ ಜಿಲ್ಲೆಯಲ್ಲಿರುವ ದೇವಸ್ಥಾನಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಡಬೇಕೆಂದು ಸಚಿವರಲ್ಲಿ ಬೇಡಿಕೆಯಿಟ್ಟರು.