ಗದಗ: ನಮ್ಮ ದೇಶದ ಐಕ್ಯತೆ ಹಾಗೂ ಏಕೀಕರಣಕ್ಕೆ ಹೋರಾಟ ಮಾಡಿದವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
1947ರ ಸ್ವಾತಂತ್ರ್ಯ ನಂತರ ದೇಶದಲ್ಲಿ ಹರಿದು ಹಂಚಿ ಹೋಗಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ಒಕ್ಕೂಟದ ವ್ಯವಸ್ಥೆಗೆ ತರಲು ಶ್ರಮಿಸಿದರು. ಅವರ ನಿರಂತರ ಶ್ರಮದ ಫಲವಾಗಿ ದೇಶವು ಒಕ್ಕೂಟ ವ್ಯವಸ್ಥೆಯಡಿ ಬರಲು ಸಾಧ್ಯವಾಯಿತು ಎಂದರು.
ದೇಶಾದ್ಯಂತ 3,000ಕ್ಕೂ ಹೆಚ್ಚು ಜಾತಿಗಳು, 25 ಸಾವಿರಕ್ಕೂ ಹೆಚ್ಚು ಉಪಜಾತಿಗಳಿದ್ದರೂ ಎಲ್ಲರಲ್ಲಿಯೂ ಒಗ್ಗಟ್ಟಿನ ಮನೋಭಾವ ಬೆಳೆಸಬೇಕು, ಅದಕ್ಕೆ ಉತ್ತೇಜನ ಕೊಡಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಿದ ವಲ್ಲಭಭಾಯಿ ಪಟೇಲ್ ಅವರಿಗೆ ಮಹಾತ್ಮ ಗಾಂಧೀಜಿ ಅವರು ಸರ್ದಾರ್ ಎಂದು ಬಿರುದನ್ನು ನೀಡಿದರು ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ಇಂಗ್ಲೆಂಡ್ ಹೋಗಿ ಕಾನೂನು ಪದವಿ ಪಡೆದು, ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಟಕ್ಕೆ ಧುಮುಕಿದರು. ರೈತರ ಹೋರಾಟದ ನೇತೃತ್ವ ವಹಿಸಿ ಯಶಸ್ಸು ಕಂಡ ವಲ್ಲಭಭಾಯಿ ಪಟೇಲ ಅವರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಹೊಂದಿದರು ಎಂದರು.
ವಿವಿಧೆಡೆ ಸಂಚರಿಸಿದ ಏಕತಾ ನಡಿಗೆ
ನಗರದ ಮುಳಗುಂದ ನಾಕಾ ಬಳಿಯ ವಿಠಲಾರೂಢ ಕಲ್ಯಾಣಮಂಟಪದಿಂದ ಆರಂಭವಾದ ಜಿಲ್ಲಾ ಮಟ್ಟದ ಏಕತಾ ನಡಿಗೆಯು ಮುಳಗುಂದ ನಾಕಾ, ಜೋಡ ಮಾರುತಿ ದೇವಸ್ಥಾನ, ಹತ್ತಿಕಾಳ ಕೂಟ, ಬಸವೇಶ್ವರ ವೃತ್ತ, ಮಹೇಂದ್ರಕರ್ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾರೋಪಗೊಂಡಿತು.