ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ನ್ಯಾಯಸಮ್ಮತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆದರೆ, ಕೋಲಾರದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುತ್ತಿಗೆ ಕಾರ್ಯಕ್ರಮ ನಡೆಯಿತು.
ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು, ಬೆಂಗಳೂರು ಗ್ರಾಮಾಂತರದಲ್ಲಿ ಶಾಸಕ ಧೀರಜ್ ಮುನಿರಾಜ್, ತುಮಕೂರಿನಲ್ಲಿ ಸುರೇಶ್‌ಗೌಡ, ಜ್ಯೋತಿ ಗಣೇಶ್, ಕೊಪ್ಪಳದಲ್ಲಿ ಜನಾರ್ದನರೆಡ್ಡಿ, ಕಲಬುರಗಿಯಲ್ಲಿ ಬಸವರಾಜ್ ಮತ್ತಿಮೂಡ್, ಬೀದರ್‌ನಲ್ಲಿ ಭಗವಂತ ಖೂಬಾ, ಬೆಳಗಾವಿಯಲ್ಲಿ ಅನಿಲ್ ಬೆನಕೆ, ಗದಗದಲ್ಲಿ ಎಸ್.ವಿ.ಸಂಕನೂರ್, ದಕ್ಷಿಣ ಕನ್ನಡದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಆಯಾ ಜಿಲ್ಲಾ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಕ್ರಮವಾಗಿ ವರ್ಗಾವಣೆಯಾಗಿರುವ ಎಲ್ಲಾ ಹಣವನ್ನು ವಾಪಸ್ ಖಾತೆಗೆ ತರಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬ್ಯಾರಿಕೇಡ್ ಕೋಟೆ: ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲುದ್ದೇಶಿಸಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ ವರೆಗೆ ಸಾರ್ವಜನಿಕರಿಗೆ ಡಿಸಿ ಕಚೇರಿ ಪ್ರವೇಶ ನಿರ್ಬಂಧಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ನಾಲ್ಕು ಮಾರ್ಗಗಳಿಗೆ ಬ್ಯಾರಿಕೇಡ್ ಇಟ್ಟು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.