ವಾಲ್ಮೀಕಿ ಕೇಸ್‌: ಬಿಎಸ್ಸೆನ್ನೆಲ್‌ ಅಧಿಕಾರಿ ಪತಿಯ ಬಂಧನ

KannadaprabhaNewsNetwork |  
Published : Jul 16, 2024, 01:32 AM ISTUpdated : Jul 16, 2024, 05:27 AM IST
ವಾಲ್ಮೀಕಿ ನಿಗಮ ಅಕ್ರಮ | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾದ ಭಾರತ ಸಂಚಾರ ನಿಗಮದ (ಬಿಎಸ್ಎನ್ಎಲ್‌) ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ವಿಶೇಷ ತನಿಖಾ ದಳವು (ಎಸ್ಐಟಿ) ಸೋಮವಾರ ಬಂಧಿಸಿದೆ.

 ಬೆಂಗಳೂರು :  ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾದ ಭಾರತ ಸಂಚಾರ ನಿಗಮದ (ಬಿಎಸ್ಎನ್ಎಲ್‌) ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ವಿಶೇಷ ತನಿಖಾ ದಳವು (ಎಸ್ಐಟಿ) ಸೋಮವಾರ ಬಂಧಿಸಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಕಾಕಿ ಶ್ರೀನಿವಾಸ್ ರಾವ್ ಬಂಧಿತನಾಗಿದ್ದು, ಎರಡು ವರ್ಷಗಳಿಂದ ಯಶವಂತಪುರ ಬಳಿ ತನ್ನ ಕುಟುಂಬದ ಜತೆ ಆತ ನೆಲೆಸಿದ್ದ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡು ದೇಶ ಸಂಚಾರ ಹೋಗಿದ್ದ ಶ್ರೀನಿವಾಸ್‌ ನಗರಕ್ಕೆ ಮರಳಿದ ಕೂಡಲೇ ಎಸ್‌ಐಟಿ ಬಂಧಿಸಿದೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಆರೋಪಿಯನ್ನು 9 ದಿನ ಕಸ್ಟಡಿಗೆ ಪಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಗಮದ 10 ಕೋಟಿ ರು. ಗುಳುಂ:

ಆರೋಪಿ ಶ್ರೀನಿವಾಸ್ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದು, ಬೆಂಗಳೂರು ವಲಯದ ಬಿಎಸ್‌ಎನ್‌ಎಲ್‌ನಲ್ಲಿ ಆತನ ಪತ್ನಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೈದರಾಬಾದ್‌ ನಗರದಲ್ಲಿ ಡಿಜಿಟಲ್ ಕಂಪನಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಶ್ರೀನಿವಾಸ್, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದ. ಹಲವು ವರ್ಷಗಳಿಂದ ಹೈದರಾಬಾದ್‌ನ ಸತ್ಯನಾರಾಯಣ್ ವರ್ಮಾನ ಜತೆ ಆತನಿಗೆ ಸ್ನೇಹವಿತ್ತು. 

ಇದೇ ಗೆಳೆತನದಲ್ಲೇ ವರ್ಮಾನ ಅಕ್ರಮ ಹಣ ವರ್ಗಾವಣೆ ದಂಧೆಗೆ ಶ್ರೀನಿವಾಸ್ ಸಾಥ್ ಕೊಟ್ಟಿದ್ದ. ಎರಡು ವರ್ಷಗಳ ಹಿಂದೆ ವಾಲ್ಮೀಕಿ ನಿಗಮದ ಮಾದರಿಯಲ್ಲೇ ಛತ್ತೀಸ್‌ಗಢ ರಾಜ್ಯದ ಕೃಷಿ ಅಭಿವೃದ್ಧಿ ಮಂಡಳಿಯಲ್ಲಿ 14 ಕೋಟಿ ರು. ಹಣ ದೋಚಿದ್ದ ಪ್ರಕರಣದಲ್ಲಿ ವರ್ಮಾ ಜತೆ ಶ್ರೀನಿವಾಸ್ ಕೂಡ ಜೈಲು ಸೇರಿದ್ದ. ಕಳೆದ ಅಕ್ಟೋಬರ್‌ನಲ್ಲಿ ಛತ್ತೀಸ್‌ಗಢದ ರಾಯಪುರ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಗೊಂಡ ನಂತರ ಬೆಂಗಳೂರಿಗೆ ಮರಳಿದ ಶ್ರೀನಿವಾಸ್, ಇದಾದ ಕೆಲವೇ ದಿನಗಳಲ್ಲಿ ‘ಆಪರೇಷನ್ ವಾಲ್ಮೀಕಿ’ ಶುರು ಮಾಡಿದ್ದ ಎನ್ನಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ 89 ಕೋಟಿ ರು. ಹಣ ಅಕ್ರಮ ವರ್ಗಾವಣೆಯಲ್ಲಿ ಹೈದರಾಬಾದ್‌ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಸತ್ಯನಾರಾಯಣ್ ವರ್ಮಾನ ಸಹಚರನಾಗಿ ಶ್ರೀನಿವಾಸ್ ಕೆಲಸ ಮಾಡಿದ್ದ. ನಿಗಮದಲ್ಲಿ ದೋಚಿದ್ದ ಹಣವನ್ನು ನಗದು ಮಾಡಿಕೊಳ್ಳಲು ಹೈದರಾಬಾದ್ ಗ್ಯಾಂಗ್ ಹವಾಲಾ ಹಾದಿ ಹಿಡಿದಿತ್ತು. ಆಗ ನಿಗಮದ ಹಣವನ್ನು ಹವಾಲಾ ಮೂಲಕ ನಗದು ರೂಪದಲ್ಲಿ ಜೇಬಿಗಿಳಿಸಿಕೊಳ್ಳಲು ಶ್ರೀನಿವಾಸ್ ಪ್ರಮುಖ ಪಾತ್ರ ವಹಿಸಿದ್ದ ಸಂಗತಿಯನ್ನು ವರ್ಮಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. 

ಆದರೆ ವರ್ಮಾ ಬಂಧನದ ಬಳಿಕ ಶ್ರೀನಿವಾಸ್ ನಾಪತ್ತೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೆ ಶ್ರೀನಿವಾಸ್‌ಗೆ ನಿಗಮದ 10 ಕೋಟಿ ರು. ಹಣ ಸಂದಾಯವಾಗಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆ ಹಣವನ್ನು ಹವಾಲಾ ಮೂಲಕ ಆತ ನಗದು ಮಾಡಿಕೊಂಡಿದ್ದ. ಆದರೆ ಈಗ ತನಗೆ ಯಾವುದೇ ಹಣ ಬಂದಿಲ್ಲವೆಂದು ಆತ ಹೇಳುತ್ತಿದ್ದಾನೆ. ಹೀಗಾಗಿ ಆತನಿಂದ ನಿಗಮದ ಹಣ ಜಪ್ತಿ ಪ್ರಕ್ರಿಯೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ದಾಟುತ್ತಿದ್ದಾಗ ಟೆಂಪೋ ಡಿಕ್ಕಿಹೊಡೆದು ಮಹಿ‍ಳೆ ದಾರುಣ ಸಾವು
ಸರ್ಕಾರಿ ಶಾಲೆ ಮುಚ್ಚಿದರೆ ರಾಜ್ಯವ್ಯಾಪಿ ಹೋರಾಟ