ವಾಲ್ಮೀಕಿ ಕೇಸ್‌ : ಬಿಜೆಪಿ ಅತೃಪ್ತರಲ್ಲಿ ಮೂಡಿದ ಸಂತಸ

KannadaprabhaNewsNetwork |  
Published : Jul 03, 2025, 01:47 AM ISTUpdated : Jul 03, 2025, 07:34 AM IST
bjp flag

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅತೃಪ್ತ ಮುಖಂಡರ ಬಣದಲ್ಲಿ ಸಂತಸ ತಂದಿದೆ.

 ಬೆಂಗಳೂರು :  ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅತೃಪ್ತ ಮುಖಂಡರ ಬಣದಲ್ಲಿ ಸಂತಸ ತಂದಿದೆ.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್‌, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಂದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ‘ವಾಲ್ಮೀಕಿ ನಿಗಮದ ಹಗರಣದ ಕುರಿತಂತೆ ಹೋರಾಟ ಸಂಬಂಧ ನಮ್ಮದೇ ಪಕ್ಷದಲ್ಲಿ ಕೆಲವರು ಜನಾಂದೋಲನಕ್ಕೆ ತಡೆ ಉಂಟು ಮಾಡಿದ್ದರ ಪರಿಣಾಮವಾಗಿ ನ್ಯಾಯಾಲಯಕ್ಕೆ ಹೋಗಬೇಕಾಯಿತು’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ನಮ್ಮ ಅವಿರತ ಕಾನೂನು ಹೋರಾಟ ಕೊನೆಗೂ ಫಲ ನೀಡಿದೆ. 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ ₹187 ಕೋಟಿ ಮೊತ್ತದಲ್ಲಿ ₹88 ಕೋಟಿಗಳನ್ನು ಹಲವು ಪ್ರಭಾವಿ ನಾಯಕರ ಕೃಪಾಕಟಾಕ್ಷದಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ.ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಹಾಗೂ ಪರಿಶಿಷ್ಟ ಜನರಿಗೆ ಆದ ಅನ್ಯಾಯವನ್ನು ಖಂಡಿಸಿ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾವು ಕೋರ್ಟ್ ಮೊರೆ ಹೋಗಿದ್ದೆವು. ಸದ್ಯ ಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ವಾಲ್ಮೀಕಿ ಹಗರಣದ ಕುರಿತಂತೆ ಹೋರಾಟ ರೂಪಿಸಿ, ಪಾದಯಾತ್ರೆ ಹೊರಡಲು ಸಿದ್ದತೆ ನಡೆಸಿಕೊಂಡಾಗ ನಮ್ಮದೇ ಪಕ್ಷದಲ್ಲಿ ಕೆಲವರು ಗೊಂದಲಗಳನ್ನು ನಿರ್ಮಿಸಿ, ಈ ಜನಾಂದೋಲನಕ್ಕೆ ತಡೆಯುಂಟು ಮಾಡಿದ್ದರ ಪರಿಣಾಮವಾಗಿ ನ್ಯಾಯಾಲಯಕ್ಕೆ ಹೋಗಲಾಗಿತ್ತು. ಅದೇನೇ ಆಗಿರಲಿ ಪರಿಶಿಷ್ಟ ಜನರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ದುರ್ಬಳಕೆ ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಲಿ ಎಂಬುದಷ್ಟೇ ನಮ್ಮ ಅಭಿಮತ ಎಂದು ಅವರು ಪ್ರಕಟಣೆ ಮೂಲಕ ಹೇಳಿದ್ದಾರೆ.

ಮುಚ್ಚಿ ಹಾಕಬಾರದೆಂದು ಕೋರ್ಟ್‌ ಮೊರೆ: ಕುಮಾರ್ ಬಂಗಾರಪ್ಪ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಚ್ಚಿ ಹಾಕಬಾರದು ಎಂಬ ಉದ್ದೇಶದಿಂದ ಬಸನಗೌಡ ಪಾಟೀಲ್ ಯತ್ನಾಳ್‌, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಮತ್ತು ನಾನು ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಪು ಮುಂದಿನ ದಿನಗಳಿಗೆ ಒಳ್ಳೆಯ ಸಂದೇಶ ನೀಡಿದೆ. ಹೈಕೋರ್ಟ್‌ಗೆ ನಮ್ಮ ತಂಡದಿಂದ ಮತ್ತು ವಾಲ್ಮೀಕಿ ಸಮುದಾಯದಿಂದ ಅಭಿನಂದನೆ ಹೇಳುತ್ತೇ‌ನೆ ಎಂದರು.

ಪಕ್ಷದ ಕಡೆಯಿಂದ ಇನ್ನಷ್ಟು ಬೆಂಬಲ ಸಿಕ್ಕಿದ್ದರೆ ಒಳ್ಳೆಯದಾಗುತ್ತಿತ್ತು. ಪ್ರತಿಪಕ್ಷವಾಗಿ ನಾವು ಹೋರಾಟ ಮಾಡಬಹುದಿತ್ತು. ಜನರ ಬಳಿ ನಾವು ಹೋರಾಟ ತೆಗೆದುಕೊಂಡು ಹೋಗಬಹುದಿತ್ತು ಎಂದು ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು.

-ಯತ್ನಾಳ, ಲಿಂಬಾವಳಿ, ಜಾರಕಿಹೊಳಿ, ಕುಮಾರ್ ಬಂಗಾರಪ್ಪ

PREV
Read more Articles on