ಬಳ್ಳಾರಿ: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರ್ಜ್, ನಮ್ಮ ಅಧಿಕಾರಿಗಳು ದಕ್ಷ ಅಧಿಕಾರಗಳಲ್ವಾ? ಅವರೇಕೆ ಸಿಬಿಐಗೆ ನೀಡುವಂತೆ ಕೇಳುತ್ತಿದ್ದಾರೆ ? ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಹೀಗಾಗಿಯೇ ಅವರು ಸಿಬಿಐಗೆ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ನಮ್ಮ ರಾಜ್ಯದ ಅಧಿಕಾರಿಗಳು ದಕ್ಷರಿದ್ದು ಪ್ರಕರಣವನ್ನು ಭೇದಿಸುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
ಬಿಜೆಪಿ ನಾಯಕರ ಮೇಲೆ ಕೇಸುಗಳಿವೆ. ಆ ಪಕ್ಷದ ಬಹಳಷ್ಟು ಜನ ಬೇಲ್ ಮೇಲೆ ಓಡಾಡುತ್ತಿದ್ದಾರೆ. ಅವರು ಭ್ರಮೆಯಲ್ಲಿದ್ದಾರೆ. ಸರ್ಕಾರ ಬೀಳುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಅವರು ಹೇಳಿದ ಮಾತ್ರಕ್ಕೆ ಸರ್ಕಾರ ಬೀಳುವುದಿಲ್ಲ. ನಮಗೆ ಜನ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.ಮುಡಾ ಹಗರಣ ಬಿಜೆಪಿಯವರ ಕಾಲದ್ದು. ಈಗ ಅವರೇ ಹೋರಾಟ ಮಾಡುತ್ತಿದ್ದಾರೆ. ಮುಡಾದಲ್ಲಿ ಯಾರು ತಪ್ಪು ಮಾಡಿದರು ಎಂಬುವುದನ್ನು ತನಿಖೆಯಿಂದ ಬಹಿರಂಗವಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ದರ ಹೆಚ್ಚಳ ಮಾಡಲ್ಲ: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವುದಿಲ್ಲ. ಸದ್ಯಕ್ಕೆ ದರ ಹೆಚ್ಚಳ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ. ನಮ್ಮ ರಾಜ್ಯಕ್ಕೆ ವಿದ್ಯುತ್ ಬಳಕೆ ಮಾಡಿ ಬೇರೆಡೆ ಮಾರಾಟ ಮಾಡುವಷ್ಟು ವಿದ್ಯುತ್ ಉತ್ಪಾದನೆ ಇದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.