ವಾಲ್ಮೀಕಿ ನಿಗಮದ ಹಗರಣ: ಸಿದ್ದು ರಾಜೀನಾಮೆ ನೀಡಲಿ

KannadaprabhaNewsNetwork |  
Published : Jun 30, 2024, 12:46 AM IST
56454 | Kannada Prabha

ಸಾರಾಂಶ

ಒಂದೆಡೆ ಸಿಎಂ ಬದಲಾವಣೆ ಕುರಿತು ಅವರ ಶಾಸಕರಲ್ಲೇ ಕೂಗು ಎದ್ದಿದೆ. ಮತ್ತೊಂದೆಡೆ ಡಿಸಿಎಂ ಹೆಚ್ಚುವರಿ ಹುದ್ದೆ ಸೃಷ್ಟಿಸುವ ಕುರಿತು ಚರ್ಚೆಯಾಗುತ್ತಿದೆ. ಹೀಗೆ ಒಳಜಗಳದಲ್ಲೇ ಕಾಂಗ್ರೆಸ್‌ ಮುಳುಗಿದೆ. ತಮ್ಮ ತಮ್ಮಲ್ಲಿನ ಒಳಜಗಳ ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು.

ಹುಬ್ಬಳ್ಳಿ:

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಹಗರಣದ ಜವಾವ್ದಾರಿ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯೇ ಹಣಕಾಸು ಇಲಾಖೆ ಇದೆ. ಅವರಿಗೆ ಗೊತ್ತಾಗದೇ ಅದ್ಹೇಗೆ ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗುತ್ತದೆ? ಅವರ ಗಮನಕ್ಕೆ ಬಾರದೇ ಹಗರಣ ಆಗಿದೆಯಾ? ಎಂದು ಪ್ರಶ್ನಿಸಿದರು.

ಇದರಲ್ಲಿ ಅವರದೂ ಪಾಲಿದೆ ಎಂಬ ಸಂಶಯವಿದೆ. ಕೂಡಲೇ ಹಗರಣದ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದ ಅವರು, ಒಂದೆಡೆ ಸಿಎಂ ಬದಲಾವಣೆ ಕುರಿತು ಅವರ ಶಾಸಕರಲ್ಲೇ ಕೂಗು ಎದ್ದಿದೆ. ಮತ್ತೊಂದೆಡೆ ಡಿಸಿಎಂ ಹೆಚ್ಚುವರಿ ಹುದ್ದೆ ಸೃಷ್ಟಿಸುವ ಕುರಿತು ಚರ್ಚೆಯಾಗುತ್ತಿದೆ. ಹೀಗೆ ಒಳಜಗಳದಲ್ಲೇ ಕಾಂಗ್ರೆಸ್‌ ಮುಳುಗಿದೆ. ತಮ್ಮ ತಮ್ಮಲ್ಲಿನ ಒಳಜಗಳ ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು ಎಂದರು.

ಅವರ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಈ ವಿಷಯವಾಗಿ ಸಾಕಷ್ಟು ಕಾಂಗ್ರೆಸ್‌ ಶಾಸಕರು ನನ್ನ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಅನುದಾನವೇನಾದರೂ ಶಾಸಕರಿಗೆ ನೇರವಾಗಿ ಕೊಡಲು ಸಾಧ್ಯವಿದ್ದರೆ ಕೊಡಿ ಎಂಬ ಬೇಡಿಕೆ ಸಲ್ಲಿಸಿದ್ದುಂಟು. ಆದರೆ ಆ ರೀತಿ ಮಾಡಲು ಬರಲ್ಲ ಎಂದು ನಾನೇ ಹೇಳಿ ಕಳುಹಿಸಿದ್ದೇನೆ.

ಸೇಡಿನ ರಾಜಕಾರಣ:

ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕದಲ್ಲಿ ಮತದಾರ ಕಾಂಗ್ರೆಸ್‌ ಕೈ ಹಿಡಿಯಲಿಲ್ಲ. ಹೀಗಾಗಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಧಾರವಾಡಕ್ಕೆ ಮಂಜೂರಾಗಿದ್ದ ಐಆರ್‌ಬಿ (ಭಾರತ ಮೀಸಲು ಪಡೆ) ಘಟಕವನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ಸ್ಥಳಾಂತರ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಎಂದರು.

ಕೆಲ ಕಂಪನಿಗಳು ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಹೊರರಾಜ್ಯಕ್ಕೆ ಹೋಗಿವೆ. ರಾಜ್ಯ ಸರ್ಕಾರ ಅವರನ್ನು ಕರೆದು ಮಾತನಾಡಬೇಕು. ರಾಜ್ಯಕ್ಕೆ ಕೈಗಾರಿಕೆಗಳು ಬರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕಲಿಗ ಸ್ವಾಮೀಜಿ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ್ದಾರೆ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಅದನ್ನು ಕಾಂಗ್ರೆಸ್‌ನವರೇ ಎಬ್ಬಿಸಿದ್ದಾರೆ ಎಂದರು.

ಈ ಗೊಂದಲವನ್ನು ಬಿಜೆಪಿಯವರು ಎಬ್ಬಿಸಿದ್ದಾರೆ ಎಂಬಂತೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಅವರು, ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕು ಎಂದು ಅವರ ಶಾಸಕರೇ ಹೇಳುತ್ತಾರೆ. ಕಾಂಗ್ರೆಸ್‌ ಶಾಸಕರು ನಮ್ಮ ಮಾತು ಕೇಳುತ್ತಾರೆಯೇ? ಹಾಗೆ ನಮ್ಮ ಮಾತು ಕೇಳುತ್ತಿದ್ದರೆ ಅವರೇಕೆ ಕಾಂಗ್ರೆಸ್ಸಿನಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿಗೆ ಕಮಾಂಡೇ ಇಲ್ಲ. ಇನ್ನೆಲ್ಲಿಂದ ಹೈಕಮಾಂಡ್‌ ಬರುತ್ತದೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ