ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಭ್ರಷ್ಟಾಚಾರಿಗಳಿಗೆ ಶಿಕ್ಷೆ ವಿಧಿಸಿ

KannadaprabhaNewsNetwork | Published : Jul 23, 2024 12:35 AM

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು, ಲೂಟಿ ಹೊಡೆದ ಹಣವನ್ನು ನಿಗಮಕ್ಕೆ ಕಟ್ಟುವಂತೆ ವ್ಯವಸ್ಥೆ ಮಾಡಬೇಕು

ರೋಣ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿಗಳ ಹಗರಣ ನಡೆದಿದ್ದು, ಇದರಲ್ಲಿ ಭಾಗಿಯಾದವರನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ರೋಣ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗ ಮನವಿ ಸಲ್ಲಿಸಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಗೌರವಾಧ್ಯಕ್ಷ ಬಸವಂತಪ್ಪ ತಳವಾರ ಮಾತನಾಡಿ, ಕರ್ನಾಟಕ ಸರ್ಕಾರ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ₹187 ಕೋಟಿಗಳು ಹಗರಣ ನಡೆದಿದೆ. ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ದುರ್ಬಳಕೆಯಾಗಿರುವ ಹಣವನ್ನು ಕೂಡಲೇ ರಾಜ್ಯ ಸರ್ಕಾರ ಮರಳಿ ಭರಿಸಿಕೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ನಿಗಮದ ಅಧಿಕಾರಿಗಳನ್ನು ವಜಾಗೊಳಸಬೇಕು. ನಿಗಮದ ಎಫ್‌ಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಯಾವುದೇ ರೀತಿಯಿಂದಲಾದರೂ ನಿಗಮಕ್ಕೆ ಮರಳಿ ಹಣ ಕಟ್ಟಿಸಿಕೊಂಡು, ವಾಲ್ಮೀಕಿ ಅಭಿವೃದ್ಧಿ ನಿಗಮ ಸುಗಮವಾಗಿ ಸಾಗಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹ 187 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದು ವಿಪರ್ಯಾಸ ಸಂಗತಿ. ಭ್ರಷ್ಟಾಚಾರಗೈದ ಎಲ್ಲರ ವಿರುದ್ಧ ಉಗ್ರ ಕ್ರಮವಾಗಬೇಕು ಎಂದರು ಆಕ್ರೋಶ ವ್ಯಕ್ತಪಡಿಸಿದರು.

ರೋಣ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು, ಲೂಟಿ ಹೊಡೆದ ಹಣವನ್ನು ನಿಗಮಕ್ಕೆ ಕಟ್ಟುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಉಪ ತಹಸೀಲ್ದಾರ್ ರೇಣುಕಾ ನೀಲುಗಲ್ಲ ಮನವಿ ಸ್ವೀಕರಿಸಿದರು. ಸಂಘ ತಾಲೂಕು ಅಧ್ಯಕ್ಷ ಬಸವರಾಜ ತಳವಾರ, ಶಿವಕುಮಾರ ತಳವಾರ, ಹನುಮಪ್ಪ ಕರಮುಡಿ, ಸಂತೋಷ ತಳವಾರ, ಶ್ರೀಕಾಂತ ಹೊಸೂರ, ಅಂದಪ್ಪ ಹೊಸಳ್ಳಿ, ಶರಣಪ್ಪ ತಳವಾರ, ರಂಗನಾಥ ಜಾಲಿಹಾಳ, ಸುನೀಲ ಕೊಣ್ಣೂರ, ಎಚ್.ಕೆ. ತಳವಾರ, ವಿ. ಎಸ್. ತಳವಾರ, ಹನುಮಂತ ಬೇಡರ, ಆರ್.ಐ. ತಳವಾರ, ಆರ್.ವಿ. ತಳವಾರ, ಎಂ.ಸಿ. ತಳವಾರ, ಯಮನಪ್ಪ ತಳವಾರ ಮುಂತಾದವರಿದ್ದರು.

Share this article