- ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಹರಿಹರ
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಫೆ.8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದ ಜನರಲ್ಲಿ ವೈಚಾರಿಕತೆ, ಜಾಗೃತಿ ಬೆಳೆಸಲು ಆದ್ಯತೆ ನೀಡಲಾಗುವುದೆಂದು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದರು.ಶ್ರೀಮಠದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಜಾತ್ರೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ. ಆದರೆ ವಾಲ್ಮೀಕಿ ಜಾತ್ರೆಯಲ್ಲಿ ಧಾರ್ಮಿಕತೆ ಬೆಳೆಸುವ ಜೊತೆಗೆ ಜನರನ್ನು ಸಂಕಷ್ಟಕ್ಕೆ ದೂಡುವ ಮೌಢ್ಯತೆ, ಕಂದಾಚಾರಗಳನ್ನು ಸಮುದಾಯದಿಂದ ಕಿತ್ತೊಗೆಯುವ ಸಲುವಾಗಿ ಜಾಗೃತಿ ಮೂಡಿಸಲೂ ಆದ್ಯತೆ ನೀಡಲಾಗುತ್ತದೆ ಎಂದರು.
ಫೆ.8ರಂದು ಬೆಳಗ್ಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ಬುಡಕಟ್ಟು ವಸ್ತು ಪ್ರದರ್ಶನ, ಉದ್ಯೋಗ, ಕೃಷಿ ಮೇಳ ನಂತರ ಮಹಿಳಾ, ನೌಕರರ, ಯುವಕರ, ವೈದ್ಯರ, ವಕೀಲರ ಗೋಷ್ಠಿಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಹಾಸನದ ಕಲಾವಿದರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.
ಪ್ರಸನ್ನಾನಂದ ಶ್ರೀ ಮಾತನಾಡಿ, ವರ್ಷಗಟ್ಟಲೆ ಧರಣಿ ಸತ್ಯಾಗ್ರಹ ನಡೆಸಿದ ಪರಿಣಾಮ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಹೆಚ್ಚಿಸಿರುವ ಈ ಮೀಸಲಾತಿಗೆ ದೇಶದ ಕಾನೂನಿನ ಮಾನ್ಯತೆ ದೊರಕಲು ಕೇಂದರ ಸರ್ಕಾರ ಈ ಮೀಸಲಾತಿಯನ್ನು ಹೆಚ್ಚಳವನ್ನು 9ನೇ ಶೆಡ್ಯೂಲ್‌ನಲ್ಲಿ ಪ್ರಕಟಿಸಬೇಕಿದೆ. ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣಪತ್ರ ನೀಡುವುದನ್ನು ತಡೆಯುವುದು ಸೇರಿದಂತೆ ಸಮುದಾಯದ ಹಲವು ಬೇಡಿಕೆಗಳನ್ನು ಜಾತ್ರಾ ಸಮಯದಲ್ಲಿ ಸರ್ಕಾರದ ಮುಂದಿಡಲಾಗುವುದು ಎಂದರು.
- - -
ಸಭೆಯಲ್ಲಿ ಶಾಸಕ ಹಾಗೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿದರು. ಪೀಠಾಧಿಪತಿ ಪ್ರಸನ್ನಾನಂದ ಶ್ರೀ, ಜಾತ್ರಾ ಸಮಿತಿ ಸಂಚಾಲಕ ಪಂಪಾಪತಿ ಇತರರು ಇದ್ದರು.