ಸವಣೂರ: ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಕಾರ್ಯಕ್ರಮದ ಆಯೋಜನೆಗೆ ವೇದಿಕೆಯಾಗದೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸರಸ್ವತಿ ಗಜಕೋಶ ಅವರ ಮೇಲಿನ ಆರೋಪದ ಸಭೆಯಾಗಿ ನಿರ್ಮಾಣಗೊಂಡಿತು.
ಅ. 17ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರ ಅಧ್ಯಕ್ಷತೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮೂಖದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿತ್ತು. ಆದರೆ, ಸ್ಥಳೀಯ ನಿವಾಸಿ ಲಚ್ಚಪ್ಪ ಕನವಳ್ಳಿ (ಲಕ್ಷ್ಮಣ) ಅವರು ಮಾತನಾಡಿ, ತಾಲೂಕಿನಲ್ಲಿ ಅಂಬೇಡ್ಕರ್ ಭವನ ಕಾಣಿಯಾಗಿವೆ. ಎಸ್‌ಸಿ, ಎಸ್‌ಟಿ ಕಾಲೋನಿಯಲ್ಲಿ ದೌರ್ಜನ್ಯ ಕಮಿಟಿ ಸಭೆ ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಆಗಮಿಸಿದ ಅನುದಾನ ಅನ್ಯರ ಪಾಲಾಗುತ್ತಿದೆ. ಸೂಕ್ತ ತನಿಖೆ ಕೈಗೊಂಡು ಸರ್ಕಾರ ನೀಡಿದ ಹಣವನ್ನು ಆಯಾ ಸಮಾಜದ ಏಳ್ಗೆಗೆ ಬಳಕೆ ಮಾಡಬೇಕು ಎಂದು ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ಗೊಂದಲದ ಗೂಡಾಗಿ ನಿರ್ಮಾಣಗೊಂಡಿತು. ತಹಸೀಲ್ದಾರ್ ಸಭೆಗೆ ಆಗಮಿಸಿದ ಸಾರ್ವಜನಿಕರನ್ನು ಸಮಾಧಾನಗೊಳಿಸಿ ಸಮಾರಂಭದ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಮೇಲಿನ ಆರೋಪಗಳು ಕೇಳುತ್ತಿದ್ದಂತೆ ತಹಸೀಲ್ದಾರ್ ವಂದನಾರ್ಪಣೆಗೆ ಮುಂದಾಗುತ್ತಿದ್ದಂತೆ ಇಲಾಖೆ ಅಧಿಕಾರಿ ಸರಸ್ವತಿ ಗಜಕೋಶ ಅವರು ಅಂಬೇಡ್ಕರ್ ಭವನಗಳು ಕಾಣೆಯಾಗಿಲ್ಲ. ತವರಮೆಳ್ಳಿಹಳ್ಳಿ ಗ್ರಾಮದ ಡಿ.ಎಸ್.ಮಾಳಗಿ ಅವರು ನೂರಾರು ಜನರ ಸಹಿ ಸಂಗ್ರಹಿಸಿ ನಿರ್ಮಿತಿ ಕೇಂದ್ರದಿಂದ ಭವನ ನಿರ್ಮಾಣ ಮಾಡದೆ ದೇವಸ್ಥಾನ ನಿರ್ಮಿಸಿ ಆ ದೇವಸ್ಥಾನಕ್ಕೆ ಅಂಬೇಡ್ಕರ್ ಭವನ ಎಂದು ನಾಮಕರಣ ಮಾಡಿದ್ದಾರೆ. ಇದರಲ್ಲಿ ನನ್ನದು ಯಾವುದೇ ಪಾತ್ರ ಇಲ್ಲ ಎನ್ನುತ್ತಿದ್ದಂತೆ ನೆರೆದ ಸಾರ್ವಜನಿಕರು ಆಕ್ರೋಶಗೊಂಡು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಹಸೀಲ್ದಾರ್ ಅವರು ಮುಂದೆ ಸಚಿವರ ಕಾನ್ಫರೆನ್ಸ್ ಮೀಟಿಂಗ್ ಇರುವುದರಿಂದ ಸಭೆಯಿಂದ ಹೊರನಡೆದರು ನಂತರ ಸಭೆ ಅರ್ಧಕ್ಕೆ ಮೊಟಕುಗೊಂಡು ಸಭೆ ಅರ್ಧದಲ್ಲಿ ತೆರೆ ಎಳೆದು ವಾಲ್ಮೀಕಿ ಸಮಾಜದ ಮುಖಂಡರಿಗೆ ಅವಮಾನ ಮಾಡಿದ್ದಾರೆ ಎಂದು ಸಮಾಜದ ಮುಖಂಡರು ಸಭೆಯಲ್ಲಿ ಆರೋಪಿಸಿದರು.ಈ ಸಂದರ್ಭದಲ್ಲಿ ಶ್ರೀಧರ ದೊಡ್ಡಮನಿ, ಪ್ರಕಾಶ ಬಾರ್ಕಿ, ನೀಲಪ್ಪ, ಯಲ್ಲಪ್ಪ ತಳವಾರ, ರಾಮಣ್ಣ ಅಗಸರ, ಪರಶುರಾಮ ಇಳಗೇರ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.