ಶಿರಹಟ್ಟಿ:ಸಮಾಜವು ಸದೃಢತೆಯನ್ನು ಹೊಂದಬೇಕಾದರೆ ಗುರುವಿನ ಮಾರ್ಗದರ್ಶನ, ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ ಹಾಗೂ ವಿದ್ಯೆ ಅತಿ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಾಲ್ಮೀಕಿಯವರ ಜೀವನ ಶೈಲಿ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಮಹರ್ಷಿ ವಾಲ್ಮೀಕಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪಟ್ಟಣದ ವಾಲ್ಮೀಕಿ ವೃತ್ತದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಪರಿವರ್ತನೆ ಜಗದ ನಿಯಮ ಎಂಬಂತೆ ಶೋಷಿತ ವರ್ಗದಲ್ಲಿ ಜನಿಸಿ ಕಾಡಿನಲ್ಲಿ ನೆಲೆಸಿ ದರೋಡೆಯನ್ನು ತನ್ನ ಕಾಯಕ ಮಾಡಿಕೊಂಡಿದ್ದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಬರೆಯುವ ಮಟ್ಟಿಗೆ ಬದಲಾದ. ಹೀಗೆ ಬದಲಾವಣೆ ಮನುಷ್ಯನ ಸ್ಥಾನವನ್ನು ಎತ್ತರಕ್ಕೇರಿಸುತ್ತದೆ. ಅವರ ಅನುಯಾಯಿಗಳಾದ ನಾವುಗಳು ಅವರ ತತ್ವ, ಆದರ್ಶಗಳನ್ನು ಹಾಗೂ ಅವರ ವಿಚಾರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಹಿಂದು ಧರ್ಮಕ್ಕೆ ಪವಿತ್ರ ರಾಮಾಯಣವನ್ನು ಕೊಡುಗೆಯಾಗಿ ನೀಡಿದ ಮಹಾತಪಸ್ವಿ ಮಹರ್ಷಿ ವಾಲ್ಮೀಕಿ ಆದರ್ಶ ವಿಚಾರಗಳು ಸ್ಮರಣೀಯವಾಗಿವೆ. ಮಾನವ ಕುಲದಲ್ಲಿ ನೈತಿಕತೆಯ ಜಾಗೃತಿ ಮೂಡಿಸುವ ಜತೆಗೆ ಮನುಷ್ಯ ಬದುಕಿನಲ್ಲಿ ಶ್ರಮಿಸಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು. ನಾಗರಿಕತೆ ಬೆಳೆದಂತೆ ಉತ್ತಮ ಸಂಸ್ಕಾರ-ಸಂಸ್ಕೃತಿಗಳು ಬೆಳೆದು ಬರಲು ಇಂತಹ ಮಹಾತ್ಮರ ಆದರ್ಶ ವಿಚಾರಗಳಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು. .
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಅನೀಲ ಕೆ. ಬಡಿಗೇರ ಮಾತನಾಡಿ, ಆದಿ ಕವಿ ಮಹರ್ಷಿ ವಾಲ್ಮೀಕಿಯವರು ಕೆಳವರ್ಗದಲ್ಲಿ ಜನಿಸಿದ್ದರು ಸಹ ತಮ್ಮ ಸಾಧನೆಯಿಂದ ಉತ್ತುಂಗಕ್ಕೇರುವ ಮುಖಾಂತರ ಇತಿಹಾಸದ ಪುಟಗಳಲ್ಲಿ ವಿರಾಜಮಾನರಾಗಿದ್ದಾರೆ. ಈ ಜಗತ್ತಿಗೆ ಅಹಿಂಸೆಯ ಸಂದೇಶ ನೀಡುವ ಮುಖಾಂತರ ಹಾಗೂ ಆದರ್ಶ ಜೀವನದ ರಾಮಾಯಣವನ್ನು ಪರಿಚಯಿಸಿರುವ ಇವರು ಸರ್ವಜನಾಂಗದ ಗುರುವಾಗಿದ್ದಾರೆ ಎಂದರು.ವಾಲ್ಮೀಕಿ ಸಮಾಜ ಹಿಂದುಳಿದಿದೆ ಎಂಬ ಕೀಳರಿಮೆಯನ್ನು ತೊರೆದು ಸಂಘಟನೆಯೊಂದಿಗೆ ಮುಂದೆ ಬಂದರೆ ವಾಲ್ಮೀಕಿ ಸಮಾಜವು ಅಭಿವೃದ್ಧಿಗೊಳ್ಳಲು ಸಾಧ್ಯ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು. ಈ ಸಮಾಜದಲ್ಲಿ ಜನಿಸಿದ ಅನೇಕರು ಮಹಾತ್ಮರಾಗಿ ಈವರೆಗೂ ಅವರ ಆದರ್ಶಗಳು ಜೀವಂತವಾಗಿರುವಂತೆ ಮಾಡಿ ಹೋಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಸದ್ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು
ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವನಗೌಡ ಎಚ್. ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ, ಪಿಎಸ್‌ಐ ಈರಪ್ಪ ರಿತ್ತಿ, ಉಪನ್ಯಾಸಕ ಮಂಜುನಾಥ ಅಂಬಲಿ, ಮಂಜುನಾಥ ಶಂಕಿನದಾಸರ, ಡಾ. ಟಿ.ಎಂ. ಮಹೇಂದ್ರಕರ, ಸುರೇಶ ಕುಂಬಾರ, ಬಸಣ್ಣ ನಾಯ್ಕರ, ಯಲ್ಲಪ್ಪ ಬಂಗಾರಿ, ಶರಣಯ್ಯ ಬಿ. ಕುಲಕರ್ಣಿ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಮಂಜುನಾಥ ಘಂಟಿ, ದೇವಪ್ಪ ಆಡೂರ, ಡಿ.ಆರ್. ಕೆಂಚಕ್ಕನವರ, ಬಸನಗೌಡ ಪಾಟೀಲ ಇತರರು ಇದ್ದರು.