ವಾಲ್ಮೀಕಿ ಸಮಾಜ ಸಂಘಟಿಸಲು ಬೃಹತ್ ಜಾಗೃತ ಜಾತ್ರೆ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯದ ಸಂಘಟನಾ ಶಕ್ತಿ ಹೆಚ್ಚಿಸಲು ಬೃಹತ್ ಜಾಗೃತ ಜಾತ್ರೆ ಆಯೋಜನೆಗೆ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮೀಜಿ ಮುಂದಾಗಿದ್ದು, ಇದಕ್ಕಾಗಿ ಎಲ್ಲ ನಾಯಕರನ್ನು ಒಟ್ಟಿಗೆ ಸೇರಿಸಲಾಗುವುದು ಎಂದು ಶಿಕಾರಿಪುರದಲ್ಲಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯದ ಸಂಘಟನಾ ಶಕ್ತಿ ಹೆಚ್ಚಿಸಲು ಎಲ್ಲ ನಾಯಕರನ್ನು ಒಟ್ಟಿಗೆ ಸೇರಿಸಿ, ಬೃಹತ್ ಜಾಗೃತ ಜಾತ್ರೆ ಆಯೋಜಿಸಲಾಗುವುದು. ಎಂದು ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ಕಚೇರಿಯಲ್ಲಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 2024ರ ಫೆ.8 ಹಾಗೂ 9ರಂದು 6ನೇ ವರ್ಷದ ಬೃಹತ್ ಜಾಗೃತ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಪಕ್ಷ ನಾಯಕರು ಹಾಗೂ ಎಲ್ಲ ಪಕ್ಷಗಳ ಮುಖಂಡರು, ಶಾಸಕರು, ಸಂಸತ್ತು ಸದಸ್ಯರನ್ನು ಸೇರಿಸಿ, ಸಮಾಜದ ಶಕ್ತಿ ಪ್ರದರ್ಶನ ಮಾಡಲಾಗುವುದು. ಆ ಮೂಲಕ ಸಭೆಯಲ್ಲಿ ಸಮಾಜಕ್ಕೆ ದೊರೆಯಬೇಕಾದ ಸವಲತ್ತುಗಳನ್ನು ನೀಡುವಂತೆ ಹಕ್ಕೊತ್ತಾಯ ಮಂಡಿಸಲಾಗುವುದು. ಈ ಜಾತ್ರೆಗೆ ಸಮಾಜದ ಎಲ್ಲ ಮುಖಂಡರು, ಮಹಿಳೆಯರು, ಮಕ್ಕಳು ಆಗಮಿಸಿ ಜಾತ್ರೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದರು.

ಮೊದಲ ಹಂತದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 94 ತಾಲೂಕುಗಳಲ್ಲಿ ಈಗಾಗಲೇ ಪ್ರವಾಸ ಪೂರ್ಣಗೊಳಿಸಿದ್ದು ಎರಡನೇ ಹಂತದಲ್ಲಿ ಬಾಕಿ ಉಳಿದಿರುವ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸ ನಡೆಯಲಿದೆ. ಜಾತ್ರೆ ಅಂಗವಾಗಿ ಪ್ರವಾಸ ಕೈಗೊಂಡ ಎಲ್ಲ ಕಡೆಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೊಂದು ವಿಶಿಷ್ಟ ಕಾರ್ಯವಾಗಲಿದೆ ಎಂದರು.

ಈ ಸಂದರ್ಭ ತಾಲೂಕು ವಾಲ್ಮೀಕಿ ಸಮಾಜ ಹಾಗೂ ವಾಲ್ಮೀಕಿ ಪತ್ತಿನ ಸಹಕಾರ ಸಂಘ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು. ನೂತನ ವರ್ಷ 2024ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ವಾಲ್ಮೀಕಿ ಗುರುಪೀಠದ ಟ್ರಸ್ಟಿ ಡಿ.ಬಿ.ಹಳ್ಳಿ ಬಸವರಾಜ್, ಲಕ್ಷ್ಮಣಪ್ಪ ಅಗಸನಹಳ್ಳಿ, ಕೆ.ಎಸ್. ಹುಚ್ರಾಯಪ್ಪ, ಎಚ್.ಡಿ. ಮಹದೇವಪ್ಪ, ವೀರೇಶ್ ಜೋಗಿಹಳ್ಳಿ, ಬಸವರಾಜಪ್ಪ ಅಡಗಂಟಿ, ಈಸೂರ್ ಹುಚ್ಚಪ್ಪ, ಶೇಖರಪ್ಪ, ನೀಲಪ್ಪ, ರಂಗೇಶ್, ರುದ್ರೇಶ್, ಶ್ರೀಧರ್, ಪ್ರವೀಣ್, ಮುಖಂಡರು ಹಾಜರಿದ್ದರು.

- - -

ಕೋಟ್‌ ಮುಂಬರುವ ದಿನಗಳಲ್ಲಿ ವಾಲ್ಮೀಕಿ ಸಮಾಜದ ಬೃಹತ್‌ ಜಾಗೃತ ಜಾತ್ರೆಯನ್ನು ವಿಭಾಗಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿಯೂ ಆಯೋಜಿಸುವಂತೆ ಒತ್ತಡ ಹೆಚ್ಚಾಗಿದೆ. ಆ ನಿಟ್ಟಿನಲ್ಲಿಯೂ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು. ಜಾತ್ರೆಯನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು

- ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ

- - - -28ಕೆ.ಎಸ್.ಕೆ.ಪಿ3:

ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿ ಸಮಾಜದ ಜಾಗೃತ ಜಾತ್ರೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದರು. ಸಮುದಾಯದ ವಿವಿಧ ಮುಖಂಡರು ಇದ್ದರು.

Share this article