ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಸಂಚಾರ ತಡೆ ನಡೆಸುವ ಮೂಲಕ ವಾಲ್ಮೀಕಿ ಸಮಾಜದ ಬಂಧುಗಳು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ಗೋಸಲ ಭರಮಪ್ಪ ಮಾತನಾಡಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಜ್ಯ ಕಂಡಂತಹ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಆಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅಂತಹ ದಕ್ಷ ಅಧಿಕಾರಿಯನ್ನು ಏಕಾಏಕಿ ಅಮಾನತು ಮಾಡಿರುವುದನ್ನು ವಾಲ್ಮೀಕಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.ಮುಖಂಡ ಡಾ. ಫನ್ನಂಗಧರ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೆಎಸ್‌ಸಿಎ ಕ್ರಿಕೆಟ್ ಆಡಳಿತ ಮಂಡಳಿ, ಪೊಲೀಸ್ ಇಲಾಖೆ ಸಲಹೆ ನಿರ್ಲಕ್ಷಿಸಿ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಹೇರಿ ಕಾರ್ಯಕ್ರಮ ಆಯೋಜಿಸಿದ್ದರಿಂದಾಗಿ ಅಭಿಮಾನಿಗಳ ಕಾಲ್ತುಳಿತ ಪ್ರಕರಣ ನಡೆದಿದೆ. ಘಟನೆಯಲ್ಲಿ ಅಮಾಯಕ ಆರ್.ಸಿ.ಬಿ ಅಭಿಮಾನಿಗಳು ಬಲಿಯಾಗಿರುವುದಕ್ಕೆ ವಾಲ್ಮೀಕಿ ಸಮಾಜ ವಿಷಾದ ವ್ಯಕ್ತಪಡಿಸುತ್ತದೆ. ಆದರೆ, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿ. ದಯಾನಂದ ಸೇರಿದಂತೆ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಬಳಿಕ ವಾಲ್ಮೀಕಿ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ವಿವೇಕಾನಂದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.