ಹಿಂದಿನಿಂದಲೂ ವಾಲ್ಮೀಕಿ ಸಮಾಜದ ಜನರು ನಾಡಿನ ಅಭ್ಯುದಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅಂತಹ ಮಹನೀಯರುಗಳ ಮೂರ್ತಿ ಪ್ರತಿಷ್ಠಾಪನೆ ಮೂಲಕ ಭವಿಷ್ಯದ ಪೀಳಿಗೆಗೆ ಅವರ ಕುರಿತು ಅರಿವು ಮೂಡಿಸಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಣಿಬೆನ್ನೂರು: ಹಿಂದಿನಿಂದಲೂ ವಾಲ್ಮೀಕಿ ಸಮಾಜದ ಜನರು ನಾಡಿನ ಅಭ್ಯುದಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅಂತಹ ಮಹನೀಯರುಗಳ ಮೂರ್ತಿ ಪ್ರತಿಷ್ಠಾಪನೆ ಮೂಲಕ ಭವಿಷ್ಯದ ಪೀಳಿಗೆಗೆ ಅವರ ಕುರಿತು ಅರಿವು ಮೂಡಿಸಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ರಾಜಾ ವೀರ ಮದಕರಿ ನಾಯಕರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರ ಮದಕರಿ ನಾಯಕರು ಪೇಶ್ವೆಗಳ ಪಾಳೆಗಾರರಾಗಿ ಆಡಳಿತ ಮಾಡಿದ್ದಾರೆ. ಅವರ ಆದರ್ಶ, ಹೋರಾಟ, ಕನಸುಗಳನ್ನು ಯಾರೂ ಮರೆಯಬಾರದು. ಸ್ವಾತಂತ್ರ‍್ಯ ಪೂರ್ವದಲ್ಲಿ ಹಿಂದುಳಿದ ಸಮಾಜಗಳಿಗೆ ಶಿಕ್ಷಣ ಕಲಿಕೆ ಬಹಳಷ್ಟು ತ್ರಾಸದಾಯಕವಾಗಿತ್ತು. ಸಂವಿಧಾನ ಬಂದ ನಂತರ ಎಲ್ಲರಿಗೂ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ. 2013ರ ಅವಧಿಯ ನಮ್ಮ ಸರ್ಕಾರ ಬಡವರಿಗೆ, ಗ್ರಾಮೀಣ ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ವಸತಿ ನಿಲಯಗಳ ಆರಂಭಕ್ಕೆ ಆದ್ಯತೆ ನೀಡಲಾಗಿತ್ತು. ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಆರ್ಥಿಕಾಭಿವೃದ್ಧಿ ಹೊಂದಬೇಕು. ಮಠಗಳ ಮೂಲಕ ಈ ಸಮಾಜವನ್ನು ಶೈಕ್ಷಣಿಕವಾಗಿ ಮುಂದೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಸಮಾರಂಭ ಉದ್ಘಾಟಿಸಿದ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ವಾಲ್ಮೀಕಿ ಸಮಾಜ ಬಹಳ ಹಿಂದುಳಿದಿದೆ. ಸಮಾಜ ಮುಂದುವರೆಯಲು ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಚುನಾವಣೆ ಸಮಯದಲ್ಲಿ ರಾಜಕೀಯ ಸಹಜ. ನಮ್ಮ ಶ್ರೀಗಳ ಹೋರಾಟದ ಫಲವಾಗಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಬಂದಿದೆ. ಮೀಸಲಾತಿ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಉದ್ಯೋಗದಲ್ಲಿ ಆದ್ಯತೆ ನೀಡಬೇಕಿದೆ. ಸತೀಶ ಜಾರಕಿಹೊಳಿ ಹಾಗೂ ಶ್ರೀರಾಮುಲು ನಮ್ಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ವಾಲ್ಮೀಕಿ ಸಮಾಜಕ್ಕೆ ಇವರಿಬ್ಬರ ಕೊಡುಗೆ ಮಹತ್ವದ್ದಾಗಿರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮದಕರಿ ನಾಯಕ ಅವರು ವೀರ, ಶೌರ್ಯ ಹೊಂದಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ವಾಲ್ಮೀಕಿ ಸಮಾಜದ ಜನರು ಖಡ್ಗದ ಜಾಗದಲ್ಲಿ ಪೆನ್ನು ಹಿಡಿಯಬೇಕಿದೆ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿದರು. ವಿಧಾನ ಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ರಮೇಶ ಆನವಟ್ಟಿ, ಭೂದಾನಿ ನೀಲಪ್ಪ ದೊಡ್ಡಮನಿ, ದರ್ಶನ ಲಮಾಣಿ, ಕೆ.ಪಿ. ಪಾಲಯ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಸಮಾಜದ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ಪುಟ್ಟಪ್ಪ ಮರಿಯಮ್ಮನವರ, ರವೀಂದ್ರಗೌಡ ಪಾಟೀಲ, ಚಂದ್ರಪ್ಪ ಬೇಡರ, ಬಸವರಾಜ ಚಳಗೇರಿ, ಇಕ್ಬಾಲಸಾಬ ರಾಣಿಬೆನ್ನೂರು, ಹನುಮಂತಪ್ಪ ಮೀನಕಟ್ಟಿ, ರಂಗನಾಥ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.