ಕನ್ನಡಪ್ರಭ ವಾರ್ತೆ ಉಡುಪಿ
ಯಾವುದೇ ಆಡಂಬರದ, ಸೋಗಿನ ಜೀವನ ನಡೆಸದೇ, ಸರಳವಾದ, ಮೌಲ್ಯ ನಿಷ್ಠೆಯ ಬದುಕು ನಡೆಸಿದ ಕೋಟ ಶಿವರಾಮ ಕಾರಂತರ ಜೀವನಶೈಲಿ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಶಿಕ್ಷಣ ತಜ್ಞ, ಉಡುಪಿ ಡಾ.ಟಿ.ಎಂ.ಎ. ಪೈ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಹೇಳಿದರು.ಅವರು ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆದ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರಂತರ ಜೀವನ ಅರಿವಿನ ಯಾತ್ರೆ. ಸಮಾಜದಲ್ಲಿ ನಡೆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರಲ್ಲಿ ಅವರು ಮೊದಲಿಗರು ಎಂದವರು ಉದಾಹರಣೆಗಳೊಂದಿಗೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯ ಜೀವನ ಶೈಲಿಯು ಪುಸ್ತಕಗಳ ಓದುವಿಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ. ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಅವರ ಕಾದಂಬರಿಗಳ ಸ್ವರೂಪ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಿ ಪುಸ್ತಕಗಳ ಓದಿನಲ್ಲಿ ಅವರ ಆಸಕ್ತಿಯನ್ನು ಹೆಚ್ಚಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಪಕ ಡಾ. ಪ್ರಸಾದ್ ರಾವ್ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ, ವಿದ್ಯಾರ್ಥಿಗಳಿಗೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.ಸುಮಾರು 35ಕ್ಕೂ ಹೆಚ್ಚು ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. ಡಾ. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಸದಸ್ಯರಾದ ಸತೀಶ್ ಕೊಡವೂರು, ಡಾ.ಭಾರತಿ ಮರವಂತೆ, ಕಾಲೇಜಿನ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿದರು. ಉಪನ್ಯಾಸಕಿ ಶಾಲಿನಿ ನಿರೂಪಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಜಿ.ಎಂ. ಶರೀಫ್ ಹೂಡೆ ವಂದಿಸಿದರು.