ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ : ಸಚಿವ ಸೋಮಣ್ಣ

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 01:15 PM IST
v somanna

ಸಾರಾಂಶ

ದೇಶದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ರೈಲ್ವೆ ಇಲಾಖೆಯಿಂದ ಕ್ರಾಂತಿಕಾರ ಕೆಲಸಗಳು ಆಗುತ್ತಿವೆ ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

ಬಳ್ಳಾರಿ: ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

ಇಲ್ಲಿನ ರೈಲು ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ನರೇಂದ್ರ ಮೋದಿ ಅವರ ಕನಸಿನಂತೆ ರೈಲ್ವೆ ಇಲಾಖೆಯಿಂದ ಕ್ರಾಂತಿಕಾರ ಕೆಲಸಗಳು ಆಗುತ್ತಿವೆ. ರಾಜ್ಯದಲ್ಲಿ 10 ವಂದೇ ಭಾರತ ರೈಲು ಓಡಿಸಲಾಗುತ್ತಿದೆ. ಇವುಗಳನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ನನೆಗುದಿಗೆ ಬಿದ್ದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದ್ದೇವೆ. ದೇಶದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ನಾನು ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲಿ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಹೆಚ್ಚಿನ ರೈಲುಗಳನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಯುಪಿಎ ಆಡಳಿತಾವಧಿಯಲ್ಲಿ ದೇಶದಲ್ಲಿ ಕೇವಲ 3,300 ಕೆಳ ಹಾಗೂ ಮೇಲ್ಸೆತುವೆ ನಿರ್ಮಾಣ ಮಾಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ 6,600ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಿದ್ದೇವೆ. ಇದರಿಂದ ಬಹುತೇಕ ರೈಲ್ವೆ ಸಮಸ್ಯೆಗಳು ನೀಗಿದಂತಾಗಿದೆ. 

ಚಿಕ್ಕಮಗಳೂರು -ತಿರುಪತಿ ಹೊಸ ರೈಲು ಉದ್ಘಾಟನೆ ಮಾಡಲಾಗಿದೆ. ಇನ್ನೂ ನಾಲ್ಕೈದು ಹೊಸ ರೈಲುಗಳನ್ನು ರಾಜ್ಯದಲ್ಲಿ ಓಡಿಸಲು ಕ್ರಮ ಕೈಗೊಂಡಿದ್ದೇವೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಕರ್ನಾಟಕವೂ ಅಭಿವೃದ್ಧಿಯಾಗಬೇಕಿದೆ. ಇದೇ ಕಾರಣಕ್ಕೆ ರೈಲ್ವೆ ಇಲಾಖೆಯಲ್ಲಿ ಕರ್ನಾಟಕಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ರೈಲ್ವೆ ಲೆವೆಲ್ ಕ್ರಾಸಿಂಗ್ ಬಗ್ಗೆ ರೈಲ್ವೆ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಈಗ ಹಂತ-ಹಂತವಾಗಿ ಪರಿಹಾರ ಮಾಡಲಾಗಿದೆ. ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬಲಿಂಗ್ ಕಾಮಗಾರಿ ಹಲವು ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ₹3300 ಕೋಟಿ ನೀಡಿದೆ. ಕೆಲಸವೂ ಆರಂಭವಾಗಲಿದೆ. ಅಮೃತ ಸ್ಟೇಷನ್ ಯೋಜನೆಯಡಿ ಹಲವು ಕಡೆಗಳಲ್ಲಿ ರೈಲ್ವೆ ಸ್ಟೇಷನ್‌ಗಳ ಆಧುನೀಕರಣ ಕೈಗೆತ್ತಿಕೊಳ್ಳಲಾಗಿದೆ. ದೇಶದ ಚಿತ್ರಣ ಬದಲಾವಣೆ ಮಾಡುವುದಕ್ಕಾಗಿ ಮೋದಿ ಅವರು ಕರ್ನಾಟಕಕ್ಕೂ ಆದ್ಯತೆ ಕೊಟ್ಟಿದ್ದಾರೆ ಎಂದು ಸಚಿವ ಸೋಮಣ್ಣ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ