ಕನ್ನಡಪ್ರಭ ವಾರ್ತೆ ಯಾದಗಿರಿ
ಬಹು ನಿರೀಕ್ಷಿತ, ಕಲಬುರಗಿ-ಬೆಂಗಳೂರು ಚಲಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೊನೆಗೂ ಆ.3ರಂದು ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ ಆಗುವುದು ಖಚಿತವಾಗಿದೆ. ಆದರೆ, ಈ ಕುರಿತು ರೈಲ್ವೆ ಇಲಾಖೆ ಪ್ರಕಟಿಸಿದ್ದು ಎನ್ನಲಾದ ಆಮಂತ್ರಣ ಪತ್ರಿಕೆಯಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕರ ಹೆಸರು ಇಲ್ಲದಿರುವುದು ಬೆಂಬಲಿಗರ ಹಾಗೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಆಮಂಂತ್ರಣ ಪತ್ರಿಕೆ ಪ್ರಕಟಿಸುವ ಮುನ್ನ ರೈಲ್ವೆ ಕೋರಿಕೆ ಮೇರೆಗೆ, ಶಿಷ್ಟಾಚಾರದಂತೆ ಜನಪ್ರತಿನಿಧಿಗಳ ಹೆಸರನ್ನು ಜಿಲ್ಲಾಡಳಿತ ಇಲಾಖೆಯ ಅಧಿಕಾರಿಗಳಿಗೆ ನೀಡಿತ್ತಾದರೂ, ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ಸುರಪುರ ಶಾಸಕ ವೇಣು ಗೋಪಾಲ ನಾಯಕ ಅವರ ಹೆಸರುಗಳು ಕಾಣದಿರುವುದು ಅಚ್ಚರಿ ಮೂಡಿಸಿದೆ.
ಆ.3ರಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ರಿಮೋಟ್ ವೀಡಿಯೋ ಲಿಂಕ್ ಮೂಲಕ ಯಾದಗಿರಿಯಲ್ಲಿ ವಂದೇ ಭಾರತ್ ನಿಲುಗಡೆಗೆ ಹಸಿರು ನಿಶಾನೆ ತೋರಲಿದ್ದಾರೆ. ರಾಯಚೂರು ಸಂಸದ ಜಿ. ಕುಮಾರನಾಯಕ, ಸಚಿವ ದರ್ಶನಾಪುರ, ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಚಂದ್ರಶೇಖರ್ ಪಾಟೀಲ್, ಶಶೀಲ್ ನಮೋಶಿ, ಛಲವಾದಿ ನಾರಾಯಣಸ್ವಾಮಿ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಘನ ಉಪಸ್ಥಿತಿಯಲ್ಲಿ ಆ.3ರಂದು ರಾತ್ರಿ 9ಗಂಟೆಗೆ ರೈಲು ನಿಲುಗಡೆ ಹಸಿರು ನಿಶಾನೆ ಕಾರ್ಯಕ್ರಮ ನಡೆಯಲಿದೆ ಎಂದು ಗುಂತಕಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಆಹ್ವಾನ ಪತ್ರಿಕೆಯಲ್ಲಿ ತಿಳಿಸಿದ್ದಾರೆ.ಬುಧವಾರ ಸಂಜೆ ವಂದೇ ಭಾರತ್ ನಿಲುಗಡೆ ಕುರಿತ ಈ ಆಮಂತ್ರಣ ಪತ್ರಿಕೆಗಳು ಹರಿದಾಡತೊಡಗಿದವು. ಇದರಲ್ಲಿ, ಕಲಬುರಗಿ ಸಂಸದ ರಾಧಾಕೃಷ್ಣ ಅವರ ಹೆಸರು ಇಲ್ಲದಿರುವದನ್ನು ಖಂಡಿಸಿ, ನಿಂಗಪ್ಪ ನೇತೃತ್ವದಲ್ಲಿ ದಲಿತ ಸಂಘಟನೆ ನಿಲ್ದಾಣಕ್ಕೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದು ರಾಜಕೀಯ ದುರುದ್ದೇಶಪೂರ್ವಕ ಎಂದು ಅವರು ಕಿಡಿ ಕಾರಿದರು.
ಆದರೆ, ಜಿಲ್ಲಾಡಳಿತ ಇವರ ಹೆಸರುಗಳ ನೀಡಿಲ್ಲ ಎಂದು ರೈಲು ಅಧಿಕಾರಿಗಳು ಸಮಜಾಯಿಷಿ ನೀಡಲೆತ್ನಿಸಿದರಾದರೂ, ಜಿಲ್ಲಾಧಿಕಾರಿಗಳು ನೀಡಿದ ಪತ್ರದಲ್ಲಿ ಸಂಸದ ರಾಧಾಕೃಷ್ಣ ಹೆಸರು ಕಂಡುಬಂದಾಗ, ಮೌನಕ್ಕೆ ಶರಣಾದ ಅಧಿಕಾರಿಗಳು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು.ಹಾಗೊಂದು ವೇಳೆ, ಸಂಸದ ರಾಧಕೃಷ್ಣ ಹೆಸರು ಹಾಕದಿದ್ದರೆ ರೈಲು ನಿಲುಗಡೆಯ ದಿನ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಸಂಸನ ನಿಂಗಪ್ಪ ಬೀರನಾಳ್, ಕಾಶಿನಾಥ್, ಚಂದ್ರು ಚೆಲುವಾದಿ, ಗೌತಮ್ ಕ್ರಾಂತಿ, ಅವಿನಾಶ ಅನ್ವಾರ್ ಮತ್ತಿತರರು ಕಾರ್ಯಕರ್ತರು ಎಚ್ಚರಿಕೆ ನೀಡಿದರು.