ಪ್ರಮೋದ ಗಡಕರ
ಕನ್ನಡಪ್ರಭ ವಾರ್ತೆ ಬೆಳಗಾವಿವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲು ನಗರದ ಜನತೆ ಭರದ ಸಿದ್ಧತೆ ನಡೆಸಿದ್ದು, ಗುರುವಾರ ಬೆಳಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ದರ ಗಗನಕ್ಕೇರಿದ್ದು ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಭರಾಟೆ ಜೋರಾಗಿತ್ತು.
ಶ್ರಾವಣ ಮಾಸ ಬಂತು ಎಂದರೇ ಸಾಲು ಸಾಲಾಗಿ ಹಬ್ಬಗಳು ಶುರುವಾಗುತ್ತವೆ. ಅದರಲ್ಲಿ ವರಮಹಾಲಕ್ಷ್ಮೀ ಹಬ್ಬ ಪ್ರಮುಖವಾಗಿದ್ದು, ಮಹಿಳಾಮಣಿಗಳು ತಮ್ಮ ಮನೆಗಳಲ್ಲಿ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂವು ಮತ್ತು ಹಣ್ಣುಗಳು ಬೇಕೇಬೇಕು. ಹಾಗಾಗಿ, ಇಂದು ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ದಾಂಗುಡಿ ಇಟ್ಟಿದ್ದರು.ನಗರದ ಖಡೇಬಜಾರ, ಹೂವಿನ ಮಾರುಕಟ್ಟೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ ಸೇರಿದಂತೆ ವಿವಿಧೆಡೆ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು. ಮಹಿಳೆಯರು, ಯುವತಿಯರು ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಹೊಸ ಸೀರೆ ಬಟ್ಟೆ, ಬಳೆ ತೊಡಗಿಸಿಕೊಳ್ಳುತ್ತಿದ್ದು, ಪೂಜಾ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದರು.ಹೂವಿನ ದರ ಎರಡು ಪಟ್ಟು ಏರಿಕೆ:
ಬೆಳಗಾವಿ ಮಾರುಕಟ್ಟೆಯಲ್ಲಿ ಎರಡು ದಿನಗಳ ಹಿಂದೆ ಹೋಲ್‌ಸೇಲ್‌ಗೆ 1 ಕೆಜಿ ಸೇವಂತಿಗೆ ₹250, ಸೇವಂತಿ ಮಾರಿಗೋಲ್ಡ್ ₹250, ಗುಲಾಬಿ ₹300, ಚೆಂಡು ಹೂವು ₹30 ರಿಂದ ₹40, ಸುಗಂಧರಾಜ ₹150 ದರವಿತ್ತು. ಆದರೆ, ಸದ್ಯ 1 ಕೆಜಿ ಸೇವಂತಿ ₹400-500, ಚಂಡು ಹೂವು ₹150, ಗುಲಾಬಿ ₹700, ಸೇವಂತಿ ಮಾರಿಗೋಲ್ಡ್ ₹700 ರಿಂದ ₹800, ಸುಗಂಧರಾಜ ₹500 ರಿಂದ ₹600 ದರದಲ್ಲಿ ಮಾರಾಟ ಆಗುತ್ತಿದೆ. ಒಂದು ವಾರದಿಂದ ಮಾರುಕಟ್ಟೆಯಲ್ಲಿ ಹೂವಿನ ವಹಿವಾಟು ಹೆಚ್ಚಿದೆ. ಅಲ್ಲದೇ ಹಣ್ಣುಗಳ ದರವೂ ಹೆಚ್ಚಾಗಿದ್ದು, 1 ಡಜನ್ ಸೇಬುಗೆ ₹250 ಇದ್ದ ₹450, ₹60 ಇದ್ದ ಬಾಳೆ ಹಣ್ಣು ₹100 ರೂ. ಮಾರಾಟ ಆಗುತ್ತಿದೆ.ವರಮಹಾಲಕ್ಷ್ಮೀ ಹಬ್ಬ ನಮ್ಮ ಪ್ರಮುಖ ಹಬ್ಬ. ವಿಜೃಂಭಣೆಯಿಂದ ಹಬ್ಬ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದ್ದೇವೆ. ಅದಕ್ಕೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ಬಂದಿದ್ದೇವು. ದರ ನೋಡಿದರೇ ದುಪ್ಪಟ್ಟಾಗಿದೆ. ಆದರೂ ದೇವಿಯ ಆರಾಧನೆ ಮುಂದೆ ಎಷ್ಟೇ ದರ ಹೆಚ್ಚಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ದೇವಿ ನಮಗೆ ಮತ್ತಷ್ಟು ಐಶ್ವರ್ಯ, ಅಂತಸ್ತು ಕರುಣಿಸುತ್ತಾಳೆ ಎಂಬ ನಂಬಿಕೆ ನಮಗಿದೆ.-ಶಿಲ್ಪಾ ಪಾಟೀಲ,
ಗೃಹಿಣಿ.ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಹೂವು, ಹಣ್ಣು ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ. ನಮಗೆ ಹೆಚ್ಚಿಗೆ ದರ ಬೀಳುತ್ತಿದೆ. ಹಾಗಾಗಿ, ನಾವು ಅನಿವಾರ್ಯವಾಗಿ ದರ ಹೆಚ್ಚಿಸಿದ್ದೇವೆ. ಗ್ರಾಹಕರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ.-ಯಲ್ಲವ್ವ ಇಮಿಡೆರ್, ವ್ಯಾಪಾರಿ.