ವರಮಹಾಲಕ್ಷ್ಮೀ ಹಬ್ಬ- ದುರ್ಗಾಪರಮೇಶ್ವರಿ ದರ್ಶನಕ್ಕೆ ಭಕ್ತ ಸಾಗರ

KannadaprabhaNewsNetwork | Published : Aug 17, 2024 12:47 AM

ಸಾರಾಂಶ

ಶಕ್ತಿ ಕ್ಷೇತ್ರಗಳಲ್ಲೊಂದಾದ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾವಿರಾರು ಮಹಿಳೆಯರು ಉಡಿ ತುಂಬುವ ಮೂಲಕ ನೆರವೇರಿಸಿದರು.

ಭಟ್ಕಳ: ತಾಲೂಕಿನಾದ್ಯಾಂತ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಮತ್ತು ಪೂಜೆಯನ್ನು ಶ್ರದ್ಧಾಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ನೆರವೇರಿಸಲಾಯಿತು.ಶಕ್ತಿ ಕ್ಷೇತ್ರಗಳಲ್ಲೊಂದಾದ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾವಿರಾರು ಮಹಿಳೆಯರು ಉಡಿ ತುಂಬುವ ಮೂಲಕ ನೆರವೇರಿಸಿದರು.

ದೇವಸ್ಥಾನದ ಎದುರು ಮಹಾಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಉಡಿ ತುಂಬಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಉಡಿ ತುಂಬುವ ಕಾರ್ಯವನ್ನು ಮಾಡಿದರು. ಕೇವಲ ತಾಲೂಕಿನಿಂದಷ್ಟೇ ಅಲ್ಲದ ಬೇರ ಬೇರೆ ತಾಲೂಕುಗಳಿಂದ ಬಂದಿದ್ದ ಭಕ್ತರು ಶ್ರೀ ದೇವರಲ್ಲಿ ಪೂಜೆ, ಹರಿಕೆ ಕಾಣಿಕೆಯನ್ನು ಸಲ್ಲಿಸಿದರು.

ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷರು, ಪದಾಧಿಕಾರಿಗೂ ಹಾಗೂ ಸದಸ್ಯರು ದೇವಸ್ಥಾನಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಅನುಕೂಲ ಮಾಡಿಕೊಟ್ಟರು.

ತಾಲೂಕಿನ ಸೋಡಿಗದ್ದೆ ಮಹಾಸತಿ ದೇವಸ್ಥಾನ, ಕಡವಿನಕಟ್ಟಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಗರದ ವಿ.ವಿ. ರಸ್ತೆಯಲ್ಲಿರುವ ನಾಗಯಕ್ಷೆ ಧರ್ಮದೇವಿ ಸಂಸ್ಥಾನ, ಮಾರಿಕಾಂಬಾ ದೇವಸ್ಥಾನ ಹಾಗೂ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಿತ್ರೆಯ ಶ್ರೀ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಹಬ್ಬರ ಪ್ರಯುಕ್ತ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯಕ್ರಮ, ವರಮಹಾಲಕ್ಷ್ಮೀ ಆರಾಧನೆ ಸಹಿತವಾಗಿ ಪೂಜೆ ಇತ್ಯಾದಿಗಳು ನಡೆದವು.

ಉಡಿ ತುಂಬುವುದು, ಬಾಗಿನ ಅರ್ಪಿಸುವುದು ಸೇರಿದಂತೆ ವಿವಿಧ ಪೂಜೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುರ್ಡೇಶ್ವರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಪತ್ನಿ ಪುಷ್ಪಲತಾ ವೈದ್ಯ ಅವರು ಈ ವರ್ಷವೂ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿದ್ದು, ಸುಂದರವಾಗಿ ಮಹಾಲಕ್ಷ್ಮೀ ದೇವಿಯನ್ನು ಅಲಂಕರಿಸಿ, ಪೂಜೆ ಸಲ್ಲಿಸಿದರಲ್ಲದೇ ಮಹಿಳೆಯರಿಗೆ ಉಡಿ ತುಂಬಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದು ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಶ್ರದ್ಧಾ-ಭಕ್ತಿಯಿಂದ ವರಮಹಾಲಕ್ಷ್ಮೀ ಪೂಜೆ

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಶ್ರದ್ದಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಇಲ್ಲಿನ ಭದ್ರಕಾಳಿ ಮಂದಿರ ತಾಮ್ರಗೌರಿ ಮಂದಿರ ಸೇರಿದಂತೆ ವಿವಿಧ ದೇವಿ ಮಂದಿರದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿತು. ಮುಂಜಾನೆಯಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ವಿಶೇಷವಾಗಿ ಮುತ್ತೈದೆಯರು ಮಂದಿರಗಳಿಗೆ ತೆರಳಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮುಂತಾದ ಪೂಜಾ ಸೇವೆ ನೆರವೇರಿಸಿದರು. ದೇವಾಲಯ ಸಾಗುವ ಮಾರ್ಗದಲ್ಲಿ ಸುಮಂಗಲಿಯರು ಪರಸ್ಪರ ಅರಿಶಿನ ಕುಂಕುಮ ವಿನಿಮಯ ಮಾಡಿಕೊಳ್ಳುತ್ತ ಹಬ್ಬದ ಶುಭಾಶಯ ಕೋರುತ್ತಿರುವ ದೃಶ್ಯ ಕಂಡು ಬಂತು. ಪ್ರತಿ ಮನೆಯಲ್ಲೂ ವಿಶೇಷ ಪೂಜೆಗಳನ್ನು ನೆರವೇರಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಲಾಯಿತು.

Share this article