ಕೋನಳ್ಳಿ ಚಾತುರ್ಮಾಸ್ಯದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ

KannadaprabhaNewsNetwork |  
Published : Aug 09, 2025, 12:02 AM IST
ಫೋಟೋ : ೮ಕೆಎಂಟಿ_ಎಯುಜಿ_ಕೆಪಿ೧ : ಕೋನಳ್ಳಿಯ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಶುಕ್ರವಾರ ಬ್ರಹ್ಮಾನಂದ ಶ್ರೀಗಳು ವರಮಹಾಲಕ್ಷ್ಮೀ ದೇವಿಗೆ ಪೂಜೆ ಸಮರ್ಪಿಸಿದರು.   | Kannada Prabha

ಸಾರಾಂಶ

ಸುಲಭ ಜನ್ಮ ಸಾಫಲ್ಯವನ್ನು ಪಡೆಯಲು ಬೇಕಾದ ಜೀವನ ವಿಧಾನವನ್ನು ವ್ರತಾಚರಣೆಗಳ ಮೂಲಕ ಋಷಿಮುನಿಗಳು ತಿಳಿಸಿಕೊಟ್ಟಿದ್ದಾರೆ.

ಕುಮಟಾ: ಸುಖದ ಇಚ್ಛೆಗೆ ಕರ್ಮವೂ ಪೂರಕವಾಗಿರಬೇಕು. ಸುಲಭ ಜನ್ಮ ಸಾಫಲ್ಯವನ್ನು ಪಡೆಯಲು ಬೇಕಾದ ಜೀವನ ವಿಧಾನವನ್ನು ವ್ರತಾಚರಣೆಗಳ ಮೂಲಕ ಋಷಿಮುನಿಗಳು ತಿಳಿಸಿಕೊಟ್ಟಿದ್ದಾರೆ. ವರಮಹಾಲಕ್ಷ್ಮೀ ವ್ರತಾಚರಣೆಯ ಉದ್ದೇಶವೂ ಇಹದ ಸುಖ, ನೆಮ್ಮದಿ, ಸಮೃದ್ಧಿಯನ್ನು ಅನುಗ್ರಹಿಸುವುದು ಆಗಿದೆ ಎಂದು ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತನಿರತ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ, ಶ್ರಾವಣ ಮಾಸದ ಶುಕ್ರವಾರದ ವಿಶೇಷವಾಗಿ ವರಮಹಾಲಕ್ಷ್ಮೀ ದೇವಿ ವೃತದ ಹಿನ್ನೆಲೆ ಹಾಗೂ ಮಹಾತ್ಮೆಯನ್ನು ವಿವರಿಸಿದರು. ವಿವಿಧ ಊರುಗಳಿಂದ ಆಸ್ಥೆಯಿಂದ ಬಂದು ಬೆಳಿಗ್ಗೆಯಿಂದಲೇ ವರಮಹಾಲಕ್ಷ್ಮೀ ವ್ರತದಲ್ಲಿ ಸಂಕಲ್ಪಿತರಾಗಿ ಪೂಜೆ ಸಲ್ಲಿಸಿದ ನೂರಾರು ತಾಯಂದಿರು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.

ನಮ್ಮ ಮನಸ್ಸಿಗೆ ಯಾವ ಅಭ್ಯಾಸವನ್ನು ರೂಢಿಸುತ್ತಾರೋ ಅದರಂತೆ ಆಗುತ್ತದೆ. ಯಾವುದರ ಅಧ್ಯಯನ ಮಾಡುತ್ತೇವೆಯೋ ಅದರ ಸಾಕ್ಷಾತ್ಕಾರ ಆಗುತ್ತದೆ. ಹಾಗೆಯೇ ಚಾತುರ್ಮಾಸ್ಯ ನಡೆಯುತ್ತಿರುವ ಪರಿಸರದಲ್ಲಿ ದೇವತೆಗಳು ಸಂಚರಿಸುತ್ತಾರೆಂಬುದು ಶಾಸ್ತ್ರ ನಿರ್ಣಯವಿದೆ. ಕೋನಳ್ಳಿಯ ಚಾತುರ್ಮಸ್ಯದ ಕಾರ್ಯಕ್ರಮಗಳು ಸಂಪೂರ್ಣ ಸಮಾಜಕ್ಕೆ ಹೊಸ ಹೊಸ ಆಧ್ಯಾತ್ಮಿಕ ಜ್ಞಾನವನ್ನು ನೀಡುವ ಘನಕಾರ್ಯ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಹಿರೇಗುತ್ತಿ ಹಾಗೂ ತೊರ್ಕೆ ಗ್ರಾಪಂ ವ್ಯಾಪ್ತಿಯ ನಾಮಧಾರಿ ಸಮಾಜದವರು ಪಾದುಕಾಪೂಜೆಯೊಂದಿಗೆ ಗುರುಸೇವೆಗೈದರು.

ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸ್ತ್ರೀಯರು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ದಂಪತಿಗಳ ಯಜಮಾನತ್ವದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವರಾಮಹಾಲಕ್ಷ್ಮೀ ವ್ರತಾಚರಣೆಯಲ್ಲಿ ಪಾಲ್ಗೊಂಡರು. ವಿಶೇಷ ಮಂಟಪದಲ್ಲಿ ಸಜ್ಜುಗೊಳಿಸಿದ್ದ ವರಮಹಾಲಕ್ಷ್ಮೀದೇವಿಗೆ ಕುಂಕುಮಾರ್ಚನೆಗೈದು, ಪೂಜೆ ಸಮರ್ಪಿಸಿದರು. ಈ ವೇಳೆ ಬ್ರಹ್ಮಾನಂದ ಶ್ರೀಗಳು ಸಾಲಂಕೃತ ವರಮಹಾಲಕ್ಷ್ಮಿಗೆ ಆರತಿಗೈದರು. ಆರ್.ಎಚ್.ನಾಯ್ಕ ಕಾಗಾಲ ದಂಪತಿ ಗುರುಸೇವಗೈದರು. ಸಂಜೆ ಭಜನೆ, ಪಾವನಿ ನಾಯ್ಕರಿಂದ ಯೋಗ ಪ್ರದರ್ಶನ, ಜಾಂಬವತಿ ಪರಿಣಯ ಯಕ್ಷಗಾನ ಪ್ರದರ್ಶನ ಜರುಗಿತು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಎಚ್.ಆರ್. ನಾಯ್ಕ, ಪದಾಧಿಕಾರಿಗಳು, ಸಮಿತಿಯ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್