ಬೆಳ್ಳಿಯಲ್ಲಿ ಅರಳಿದ ವರಸಿದ್ಧಿ ವಿನಾಯಕ

KannadaprabhaNewsNetwork |  
Published : Aug 29, 2025, 02:00 AM IST
ಹುಬ್ಬಳ್ಳಿಯ ಶೀಲವಂತರ ಓಣಿಯಲ್ಲಿ ಶ್ರೀ ವರಸಿದ್ಧಿವಿನಾಯಕ ಮಂಡಳದಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ. | Kannada Prabha

ಸಾರಾಂಶ

ಕಳೆದ 45 ವರ್ಷಗಳ ಹಿಂದೆ ಅಪ್ಪಾಜಿ (ಶಿದ್ದಪ್ಪ) ಕಮಡೊಳ್ಳಿಶೆಟ್ರು ಅವರಿಂದ ಆರಂಭವಾದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಇಂದಿಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ. ಪ್ರತಿವರ್ಷವೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಹುಬ್ಬಳ್ಳಿ: ಇಲ್ಲಿನ ಶೀಲವಂತರ ಓಣಿಯಲ್ಲಿ ಕಳೆದ 45 ವರ್ಷಗಳಿಂದ ಶ್ರೀ ವರಸಿದ್ಧಿವಿನಾಯಕ ಮಂಡಳದಿಂದ 41 ಕೆಜಿ ಬೆಳ್ಳಿಯ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದ್ದು, ಜತೆಗೆ ಪ್ರತಿ ವರ್ಷವೂ ಒಂದೊಂದು ರೂಪಕಗಳನ್ನು ಪ್ರಸ್ತುತಪಡಿಸುತ್ತ ಜನಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ 45 ವರ್ಷಗಳ ಹಿಂದೆ ಅಪ್ಪಾಜಿ (ಶಿದ್ದಪ್ಪ) ಕಮಡೊಳ್ಳಿಶೆಟ್ರು ಅವರಿಂದ ಆರಂಭವಾದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಇಂದಿಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ. ಪ್ರತಿವರ್ಷವೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

41 ಕೆಜಿಯ ಬೆಳ್ಳಿ ಮೂರ್ತಿ: ಇಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಯು (ಪ್ರಭಾವಳಿ ಸೇರಿ) 41 ಕೆಜಿ ಬೆಳ್ಳಿ, ಒಂದು ಕೆಜಿ ಬಂಗಾರದ ಅಭರಣ ಬಳಸಲಾಗಿದೆ. ಪ್ರತಿವರ್ಷವೂ ಮೂರ್ತಿ ಪ್ರತಿಷ್ಠಾಪನೆಯ ಪೂರ್ವದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಪ್ರತಿಷ್ಠಾಪನೆಯ ಸ್ಥಳದ ವರೆಗೂ ಅದ್ಧೂರಿ ಮೆರವಣಿಗೆ ನಡೆಸಲಾಗುತ್ತದೆ.

ಪ್ರತಿವರ್ಷವೂ ಹೊಸ ರೂಪಕ: ಕಳೆದ 45 ವರ್ಷಗಳಿಂದ ಗಣೇಶೋತ್ಸವದ ಅಂಗವಾಗಿ ಒಂದೊಂದು ಇತಿಹಾಸ ಸಾರುವ ರೂಪಕಗಳ ಪ್ರದರ್ಶಿಸಲಾಗುತ್ತಿದೆ. ಈಗಾಗಲೇ ಮೈಸೂರು ಚಾಮುಂಡಿ ಮಹಿಮೆ, ಗೋಕರ್ಣ ಆತ್ಮಲಿಂಗ, ತಿರುಪತಿ ತಿಮ್ಮಪ್ಪ ಮಹಿಮೆ, ಕಳೆದ ವರ್ಷ ಶ್ರೀ ಸಿದ್ಧಾರೂಢರ ಮಹಿಮೆ ಸಾರುವ ರೂಪಕ ಪ್ರದರ್ಶಿಸಲಾಗಿತ್ತು. ಈ ಬಾರಿ ಶ್ರೀ ಅಯ್ಯಪ್ಪಸ್ವಾಮಿ ಬಾಲ್ಯಾವಸ್ಥೆಯ ಜೀವನ ಕುರಿತು ತಿಳಿಸುವ "ಪಂದಳಕಂದ " ಪ್ರದರ್ಶನದ ವ್ಯವಸ್ಥೆ ಮಾಡಿದೆ.

ಪ್ರತಿವರ್ಷವೂ ಪ್ರತಿಷ್ಠಾಪನೆ ಮಾಡಿದ 5ನೇ ದಿನದಿಂದ ವಿಸರ್ಜನೆಯ ವರೆಗೂ ನಿತ್ಯವೂ ಸಂಜೆ 7ರಿಂದ ಮಧ್ಯರಾತ್ರಿ 2.30 ಗಂಟೆಯ ವರೆಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ನಿತ್ಯವೂ 15 ಸಾವಿರಕ್ಕೂ ಅಧಿಕ ಜನರು ಆಗಮಿಸುವುದು ಇಲ್ಲಿನ ವಿಶೇಷ.

ಯುವಕರಿಗೆ ಆದ್ಯತೆ: ಕಳೆದ 45 ವರ್ಷಗಳಿಂದ ಓಣಿಯ ಹಿರಿಯರಾದ ಈಶ್ವರಪ್ಪ ಹೊನ್ನಣ್ಣವರ, ಅಧ್ಯಕ್ಷರಾದ ರಮೇಶ ಬಾಫಣಾ, ಕೋಶಾಧ್ಯಕ್ಷ ಕಿರಣ ಬೆಟಗೇರಿ, ಉಪಾಧ್ಯಕ್ಷ ಪ್ರಕಾಶ ಸಾಂಬ್ರಾಣಿ, ಸಹಕಾರ್ಯದರ್ಶಿ ಶಿದ್ಧಲಿಂಗಪ್ಪ ಶೀಲವಂತರ, ಎ.ಎಂ. ಗಾವಡೆ ಸೇರಿದಂತೆ ಓಣಿಯ ಹಿರಿಯರ ಮುಖಂಡತ್ವದಲ್ಲಿಯೇ ಗಣೇಶೋತ್ಸವ ಮುನ್ನಡೆಸಿಕೊಂಡು ಬಂದಿದೆ. ಮುಂದಿನ ವರ್ಷದಿಂದ ಮಂಡಳಿಯ ಯುವ ಪದಾಧಿಕಾರಿಗಳಾದ ಕಶ್ಯಪ ಮಜೇತಿಯಾ, ನಿರಂಜನ ಶೀಲವಂತರ, ವಿಜಯ ಸಾಬ್ರಾಣಿ, ಶಂಭು ಅಂಗಡಿ, ಶ್ರೀಫಲ ಬಾಫನಾ, ಚನ್ನವೀರೇಶ ಕಮಡೊಳ್ಳಿಶೆಟ್ರ, ಸಂದೀಪ ಸಣ್ಣಕ್ಕಿ, ಶಿವಾನಂದ ಮೆಣಸಿನಕಾಯಿ, ರಮೇಶ ಗಾಯಕವಾಡ ನೇತೃತ್ವದ ಯುವ ಮಂಡಳಿಗೆ ಹಸ್ತಾಂತರಿಸಿ ಅವರ ಮೂಲಕವೇ ಯಶಸ್ವಿ ಗಣೇಶೋತ್ಸವ ಆಚರಿಸಲು ಈಗಿನ ಮಂಡಳಿ ನಿರ್ಧರಿಸಿದೆ.

ಕಳೆದ 45 ವರ್ಷಗಳಿಂದ ಓಣಿಯ ಹಿರಿಯರಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಗಣೇಶೋತ್ಸವ ಆಚರಣೆಯನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶ ಹೊಂದಿದೆ. ಮುಂದಿನ ವರ್ಷದಿಂದ ಮಂಡಳಿಯ ಯುವಕರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ವರಸಿದ್ಧಿವಿನಾಯಕ ಮಂಡಳಿಯ ಕಾರ್ಯದರ್ಶಿ ಎಸ್‌.ಎಂ. ಕಮಡೊಳ್ಳಿಶೆಟ್ರು ಹೇಳಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’