-ವಿನೋಬ ನಗರ 2ನೇ ಮುಖ್ಯರಸ್ತೆಯಲ್ಲಿ ನಿಧಾನವಾಗಿ ಸಾಗಿದ ಶ್ರೀ ವರಸಿದ್ಧಿ ವಿನಾಯಕ । ವಿಘ್ನ ನಿವಾರಕನಿಗೆ ಜೈಕಾರ, ಮಳೆ ಜೊತೆ ಅಪಾರ ಪುಷ್ಟವೃಷ್ಟಿ
ಬಾಕ್ಸ:-ದೂಡಾ ಅಧ್ಯಕ್ಷ, ಡಿಸಿ ಸೇರಿದಂತೆ ಪಕ್ಷಾತೀತವಾಗಿ ಮುಖಂಡರು ಮೆರವಣಿಗೆಯಲ್ಲಿ ಭಾಗಿ-ಯುವಕರಗಿಂತಲು ತಾವು ಕಮ್ಮಿ ಇಲ್ಲವೆಂಬಂತೆ ವಿದ್ಯಾರ್ಥಿನಿಯರು, ಯುವತಿಯರ ಹೆಜ್ಜೆಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿವರ್ಷದಂತೆ ವಿನೋಬ ನಗರದ 2ನೇ ಮುಖ್ಯರಸ್ತೆಯ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಶ್ರೀ ಆದಿಶಕ್ತಿ ಸಮೇತ ಶ್ರೀ ಗಣೇಶಮೂರ್ತಿಯ ವಿಸರ್ಜನಾ ಮೆರವಣಿಗೆಗೆ ವಿಘ್ನ ನಿವಾರಕನಿದ್ದ ಟ್ರ್ಯಾಕ್ಟರ್‌ನ್ನು ಎಂದಿನಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ವತಃ ಚಾಲನೆ ಮಾಡುವ ಮೂಲಕ ಸಾರಾಗವಾಗಿ ಜನ ಸಾಗರ ಸಾಗುವಂತೆ ನೋಡಿಕೊಂಡರು.ಇಲ್ಲಿನ ವಿನೋಬ ನಗರದ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಪ್ರತಿವರ್ಷದಂತೆ 32ನೇ ವರ್ಷದ ಗಣೇಶೋತ್ಸವ ಆಚರಿಸಲಾಯಿತು. ಭಾನುವಾರ ಮಧ್ಯಾಹ್ನ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಶ್ರೀ ವಿನಾಯಕನು ತಾಯಿ ಆದಿಶಕ್ತಿಯ ನೆರಳಿನಲ್ಲಿ ಕುಳಿತಂತೆ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸ ಕರಿಯಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪಾಲಿಕೆ ಸದಸ್ಯ ಎ.ನಾಗರಾಜ ಸೇರಿದಂತೆ ಮುಖಂಡರು, ಜನ ಪ್ರತಿನಿಧಿಗಳು ಪೂಜೆ ಸಲ್ಲಿಸಿದರು.
ನಂತರ ಶ್ರೀವೀರ ವರಸಿದ್ಧಿ ವಿನಾಯಕ ತಾಯಿ ಸಮೇತನಾಗಿದ್ದ ಟ್ರ್ಯಾಕ್ಟರ್ ಎಲ್ಲರ ಕಣ್ಮನ ಸೆಳೆಯುತ್ತಿತ್ತು.ಎಂದಿನಂತೆ ಮೆರವಣಿಗೆ ಹೊರಡುವ ಸಮಯಕ್ಕೆ ಸ್ಥಳಕ್ಕೆ ಧಾವಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಆಗಮನದೊಂದಿಗೆ ಮೆರವಣಿಗೆ ಮತ್ತಷ್ಟು ರಂಗೇರಿತು. ಸ್ವತಃ ತಾವೇ ಟ್ರ್ಯಾಕ್ಟರ್ ಚಾಲನೆ ಸೀಟಿನಲ್ಲಿ ಕುಳಿತು, ಎಂದಿನಂತೆ ವಿಘ್ನೇಶ್ವರನಿಗೆ ಜೈಕಾರ ಹಾಕುವುದರೊಂದಿಗೆ ಅಬ್ಬರದ ಡಿಜೆ ಸೆಟ್ ನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕರು, ಯುವತಿಯರು, ಮಹಿಳೆಯರು, ಹಿರಿಯರ ಸಮಕ್ಷಮ ಮೆರವಣಿಗೆಯೂ ಶುರುವಾಯಿತು. ಮಾರ್ಗದುದ್ದಕ್ಕೂ ಕಟ್ಟಡಗಳ ಮೇಲಿಂದ ವಿಘ್ನೇಶ್ವರನಿಗೆ ಪುಷ್ಪವೃಷ್ಟಿಯಾಗುತ್ತಿತ್ತು.
ವಿನೋಬ ನಗರದ 2ನೇ ಮುಖ್ಯರಸ್ತೆಯ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲಿನ ಮಸೀದಿ ಬಳಿ ಬ್ಯಾರಿಕೇಡ್ ಹಾಕಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು. ಇಡೀ ಮೆರವಣಿಗೆಯಲ್ಲಿ ಯಾವುದೇ ಗದ್ದಲವಿಲ್ಲದಂತೆ ಗಣೇಶನ ಮೆರವಣಿಗೆಯು ಹಳೆ ಪಿಬಿ ರಸ್ತೆ ತಲುಪಿತು. ಅಲ್ಲಿಂದ ಅರುಣ ಚಿತ್ರ ಮಂದಿರ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ವಿನೋಬ ನಗರ 1ನೇ ಮುಖರಸ್ತೆ ಮಾರ್ಗವಾಗಿ ಮತ್ತೆ ಹಳೆ ಪಿಬಿ ರಸ್ತೆ ತಲುಪಿದ ಮೆರವಣಿಗೆಯು ನಂತರ ಬಾತಿ ಕರೆಗೆ ಕಡೆ ಸಾಗಿತು. ಬಾತಿ ಕೆರೆಯ ಬಳಿ ಗಣೇಶನ ವಿಸರ್ಜನೆ ನೆರವೇರಿತು.ಮೆರವಣಿಗೆಯುದ್ದಕ್ಕೂ ಎರಡೂ ಬದಿಗಳಲ್ಲಿ ಮನೆ, ಕಟ್ಟಡ, ಕಿಟಕಿಗಳಿಂದ ಇದ್ದ ಜನರು ಗಣಪತಿ ಬಪ್ಪ ಮೋರೆಯಾ, ಶ್ರೀ ವಿಘ್ನೇಶ್ವರನಿಗೆ ಜಯವಾಗಲಿ, ಗಣೇಶನಿಗೆ ಜಯವಾಗಲಿ ಎಂಬುದಾಗಿ ಘೋಷಣೆ ಕೂಗುತ್ತಿದ್ದರೆ, ಮಕ್ಕಳು, ಮಹಿಳೆಯರು ಹೂವಿನ ಸುರಿಮಳೆಯನ್ನೇ ಸುರಿಸಿ, ಗಣೇಶನಿಗೆ ಬೀಳ್ಕೊಟ್ಟರು. ಮಳೆಯನ್ನೂ ಲೆಕ್ಕಿಸದೇ, ಮೆರವಣಿಗೆಯಲ್ಲಿದ್ದವರ ಉತ್ಸಾಹ ಕಡಿಮೆಯಾಗಲಿಲ್ಲ. ಮಳೆಯ ಮಧ್ಯೆಯೂ ಪ್ರಥಮ ಪೂಜಿತ ಗಣಪನಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಮಧ್ಯಾಹ್ನ 2ನೇ ಮುಖ್ಯರಸ್ತೆಯ ಗಣೇಶ ಪ್ರತಿಷ್ಠಾಪಿಸಿದ್ದ ಸ್ಥಳದಿಂದ ಹೊರಟ ಮೆರವಣಿಗೆ 2ನೇ ಮುಖ್ಯರಸ್ತೆ ದಾಟುವಷ್ಟರಲ್ಲೇ ಸಂಜೆಯಾಗಿತ್ತು. 1ನೇ ಮುಖ್ಯರಸ್ತೆಗೆ ಮೆರವಣಿಗೆ ತಲುಪಿದಾಗಲೂ ಜನರಲ್ಲಿ ಅದೇ ಉತ್ಸಾಹ ಕಂಡು ಬಂದಿತು. ಸಡಗರ, ಸಂಭ್ರಮದಿಂದ ಗಣೇಶನಿಗೆ ಬೀಳ್ಕೊಡಲಾಯಿತು. ಮೆರವಣಿಗೆಯಲ್ಲಿ ಸಮಿತಿಯ ಟಿ.ಎಚ್.ಗುರುನಾಥ ಬಾಬು, ನಾಗರಾಜಗೌಡ, ಟಿ.ಗಣೇಶ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಂಜುನಾಥ, ಹಿಂದು ಜಾಗರಣಾ ವೇದಿಕೆಯ ಸತೀಶ ಪೂಜಾರಿ ಶ್ರೀರಾಮ ಸೇನೆಯ ಮಣಿಕಂಠ, ಸಾಗರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.---
ಬಾಕ್ಸ:*ನೆರೆ ಜಿಲ್ಲೆಗಳಲ್ಲೂ ಹೆಸರಾದ ಗಣೇಶೋತ್ಸವ
ದಾವಣಗೆರೆಯಲ್ಲಿ ವಿನೋಬ ನಗರದ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಗಣೇಶ ವಿಸರ್ಜನಾ ಮೆರವಣಿಗೆಯೆಂದರೆ ಜಿಲ್ಲಾ ಕೇಂದ್ರಕ್ಕಷ್ಟೇ ಅಲ್ಲ, ನೆರೆಯ ಜಿಲ್ಲೆಗಳಲ್ಲೂ ಹೆಸರಾಗಿದೆ. ಅದಕ್ಕೆ ಅನುಗುಣವಾಗಿ ಇಡೀ 2ನೇ ಮುಖ್ಯರಸ್ತೆ ಕೇಸರಿಮಯವಾಗಿತ್ತು. ಡಿಜೆ ಸದ್ದು, ನಾಸಿಕ್ ಡೋಲ್, ಡೊಳ್ಳುಗಳು ನಂದಿಕೋಲು, ವೀರಗಾಸೆ, ಸಮಾಳ ಸೇರಿದಂತೆ ಕಲಾ ಪ್ರಕಾರಗಳ ಸದ್ದಿಗೆ ತಕ್ಕಂತೆ ಜನರು ಹೆಜ್ಜೆ ಹಾಕಿದರು. ಯುವಕರಿಗಿಂತ ತಾವೇನೂ ಕಮ್ಮಿ ಇಲ್ಲವೆಂಬಂತೆ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಹೆಜ್ಜೆ ಹಾಕಿದ್ದು ಈ ಬಾರಿಯ ವಿಶೇಷವಾಗಿತ್ತು. ಇನ್ನು ಸ್ವತಃ ಗಣೇಶನ ಹೊತ್ತ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜನರತ್ತ ಕೈಬೀಸುತ್ತಿದ್ದಂತೆ, ಮುಖಂಡರೊಬ್ಬರು ಗಾಂಧಿ ಟೊಪ್ಪಿಗೆಯನ್ನು ಸಚಿವರಿಗೆ ಹಾಕಿದರು.-(ಫೋಟೋ ಬರಲಿವೆ)