ಭರಣಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವರ್ಧಂತಿ

KannadaprabhaNewsNetwork | Published : May 11, 2025 1:25 AM
Follow Us

ಸಾರಾಂಶ

ನಮಗೆ ಎದುರಾಗುವ ತೊಂದರೆ, ತಾಪತ್ರಯಗಳೇ ನಮ್ಮ ಜಾಗೃತಿಗೆ ಕಾರಣವಾಗಿ, ದೇವಾಲಯಗಳ ನಿರ್ಮಾಣಕ್ಕೂ ಕಾರಣವಾಗುತ್ತದೆ

ಯಲ್ಲಾಪುರ: ಸಮಾಜದ ಜನರಿಗೆ ಮಾನಸಿಕ ನೆಮ್ಮದಿ ಹಾಗೂ ಜೀವನದ ಆಶೋತ್ತರಗಳನ್ನು ಪಡೆಯಲು ನಿರ್ಮಿಸಲಾಗುವ ದೇವಾಲಯ ಅಥವಾ ಕ್ಷೇತ್ರ ನಿರ್ಮಾಣಗಳ ಕಾರ್ಯ ಸುಲಭದಿಂದಾಗುವುದಿಲ್ಲ. ನಮಗೆ ಎದುರಾಗುವ ತೊಂದರೆ, ತಾಪತ್ರಯಗಳೇ ನಮ್ಮ ಜಾಗೃತಿಗೆ ಕಾರಣವಾಗಿ, ದೇವಾಲಯಗಳ ನಿರ್ಮಾಣಕ್ಕೂ ಕಾರಣವಾಗುತ್ತದೆ ಎಂದು ಸಾಗರ ತಾಲೂಕಿನ ಸಿಗಂದೂರಿನ ಶ್ರೀಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪ ಹೇಳಿದರು.ಅವರು ತಾಲೂಕಿನ ಭರಣಿಯ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩ ದಿನಗಳ ವಾರ್ಷಿಕ ವರ್ಧಂತಿಯ ಸಮಾರೋಪದಲ್ಲಿ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಕೇವಲ ಶ್ರೀಮಂತಿಕೆ ಇದ್ದರೂ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ನಿಷ್ಪ್ರಯೋಜಕ. ನಮ್ಮ ಹಿರಿಯರು ದೇವಾಲಯಗಳ ನಿರ್ಮಾಣದಿಂದ ಶಾಂತಿ, ಸಮಾಧಾನ ದೊರೆಯುತ್ತದೆ ಎಂಬುದನ್ನು ಅರಿತಿದ್ದರು. ಪ್ರಸ್ತುತ ಇಂತಹದೇ ಚಿಂತನೆ ಹಿನ್ನೆಲೆಯಲ್ಲಿ ಎ.ಜಿ. ನಾಯ್ಕರ ಪ್ರಯತ್ನದಿಂದ ನಿರ್ಮಾಣಗೊಂಡ ಇಲ್ಲಿಯ ದೇವಾಲಯದ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ನರಸಿಂಹ ಭಟ್ಟ ಮಾತನಾಡಿ, ಬದುಕಿನಲ್ಲಿ ಪ್ರತಿಯೊಬ್ಬರಿಗೂ ಸಿದ್ಧಿಗೆ ಸಾಧನೆ ಅಗತ್ಯ ಬೇಕು. ತನ್ಮೂಲಕ ಸತ್ಯ, ಧರ್ಮಗಳ ಮೆಟ್ಟಿಲೇರಬೇಕು. ವಿವೇಕ, ವಿನಯ, ಸದ್ವಿಚಾರ, ತಾಳ್ಮೆ ಹಾಗೂ ಜಾಣ್ಮೆಗಳ ಧರ್ಮಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಭರಣಿಯ ದೇವಾಲಯ ಶ್ರೀಕ್ಷೇತ್ರವಾಗಲು ಎ.ಜಿ.ನಾಯ್ಕರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ದೇವಸ್ಥಾನದ ಧರ್ಮದರ್ಶಿ ಎ.ಜಿ. ನಾಯ್ಕ ಮಾತನಾಡಿ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರ ನಡೆಸಬೇಕೆಂಬ ಯೋಚನೆಯಿಂದ ಆರಂಭಿಸಲಾದ ದೇವಸ್ಥಾನ ಇದೀಗ ಯಶಸ್ವಿಯಾಗಿ ೩ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಇದಕ್ಕೆ ಸಹಕರಿಸಿ ತನು-ಮನ-ಧನದ ನೆರವು ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞ. ಇಲ್ಲಿನ ಎಲ್ಲ ಫಲಾಫಲಗಳು ಭಗವಂತನಿಗೆ ಸಮರ್ಪಿತವಾಗಿದೆ ಎಂದರು.

ಅತಿಥಿಗಳಾಗಿದ್ದ ಕನ್ನೂರಿನ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಆರ್.ಡಿ. ನಾಯ್ಕ ಮಾತನಾಡಿ, ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಅತಿ ಕಷ್ಟಕರವಾದ ಇಂದಿನ ದಿನಗಳಲ್ಲಿ ಎ.ಜಿ.ನಾಯ್ಕರು ಸಾಹಸಪಟ್ಟು ಹಲವು ದಾನಿಗಳ, ಪ್ರಾಯೋಜಕರ ನೆರವು ಪಡೆದು, ದೇವಾಲಯ ನಿರ್ಮಿಸಿದ್ದಾರೆ ಎಂದರು.

ಸಾಗರದ ಹೊಗೆವಡ್ಡಿಯ ಧರ್ಮದರ್ಶಿ ಅನಂತ ನಾಯ್ಕ ಭಟ್ಕಳ ಮಾತನಾಡಿ, ಪರಮಾತ್ಮನೆನಿಸಲು ಎಲ್ಲರಿಗೂ ಸಾಧ್ಯವಿಲ್ಲವಾದರೂ ಮನಸ್ಸು ಮಾಡಿದರೆ ಧರ್ಮಾತ್ಮರಾಗಲು ಸಾಧ್ಯ. ನಾವು ಸದೃಢರಾಗಲು ವೈರಿಗಳು ಹೆಚ್ಚಾಗಬೇಕು. ಸಮಾಜದಲ್ಲಿಂದು ಸಮಾನತೆ ಕೊರತೆ ಕಂಡುಬರುತ್ತಿದೆ. ಅಂತರಾಳದ ಮನಸ್ಸಿನಿಂದ ಮಾತ್ರ ಸಮಾಜಸೇವೆ ಸಾರ್ಥಕವಾಗುತ್ತದೆ. ಆರೋಗ್ಯ ಸುರಕ್ಷೆ, ಪರಿಸರ ಜಾಗೃತಿಗಳಿಂದ ಸಮಾಜ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ ಎಂದರು.

ಶಿರಸಿಯ ನಾಮಧಾರಿ ಅಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಸಾಂದರ್ಭಿಕ ಮಾತನಾಡಿದರು. ಸುವರ್ಣಾ ನಾಯ್ಕ ಉಪಸ್ಥಿತರಿದ್ದರು. ಚಂದನಾ ನಾಯ್ಕರ ಪ್ರಾರ್ಥಿಸಿದರು. ಮಂಜೇಶ ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೇರೂಗಾರ ನಿರ್ವಹಿಸಿದರು. ರತ್ನಾಕರ ನಾಯ್ಕ ವಂದಿಸಿದರು.