ಇಂದಿನ ಕೃಷಿ ಸಚಿವರ ಸಭೆಗೆ ವಿವಿಧ ಸಂಘಟನೆಗಳಿಂದ ಬಹಿಷ್ಕಾರ

KannadaprabhaNewsNetwork |  
Published : Jun 25, 2025, 12:34 AM IST
೨೪ಕೆಎಂಎನ್‌ಡಿ-೨ಮಂಡ್ಯದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ ನಡೆದ ರೈತ, ದಲಿತ, ಪ್ರಗತಿಪರ, ಕನ್ನಡ ಸಂಘಟನೆಗಳ ಮುಖಂಡರ ಸಭೆಯಲ್ಲಿ  ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕರೆದಿರುವ ಸಭೆಗೆ ತೆರಳದಂತೆ ನಿರ್ಣಯ ಕೈಗೊಳ್ಳಲಾಯಿತು. | Kannada Prabha

ಸಾರಾಂಶ

ಕೃಷ್ಣರಾಜಸಾಗರ ಅಣೆಕಟ್ಟು ಬಳಿ ರಾಜ್ಯ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಗಳಿಗೆ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಸರ್ವಾನುಮತದ ವಿರೋಧ ವ್ಯಕ್ತಪಡಿಸಿದ್ದು, (ಜೂ.೨೫) ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕರೆದಿರುವ ಸಭೆಯನ್ನು ಬಹಿಷ್ಕರಿಸಲು ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಅಣೆಕಟ್ಟು ಬಳಿ ರಾಜ್ಯ ಸರ್ಕಾರ ಜಾರಿಗೊಳಿಸಲುದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಗಳಿಗೆ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಸರ್ವಾನುಮತದ ವಿರೋಧ ವ್ಯಕ್ತಪಡಿಸಿದ್ದು, (ಜೂ.೨೫) ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕರೆದಿರುವ ಸಭೆಯನ್ನು ಬಹಿಷ್ಕರಿಸಲು ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.

ಮಂಗಳವಾರ ನಗರದ ಪ್ರವಾಸಿಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಸಂಘಟನೆಗಳ ಮುಖಂಡರು ಸಭೆ ನಡೆಸಿ ಸಭೆಗೆ ಹಾಜರಾಗದಿರುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡರು.

ಜೂ.೬ರಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ಕರೆದಿದ್ದ ಸಭೆಯಲ್ಲೇ ಯೋಜನೆಗಳ ಕುರಿತಂತೆ ನಮ್ಮ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇವೆ. ಸಂಘಟನೆಗಳು ಕೈಗೊಂಡಿರುವ ನಿರ್ಣಯವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆಯೂ ತಿಳಿಸಿದ್ದೆವು. ಇದೀಗ ಮತ್ತೆ ಜೂ.೨೫ರಂದು ಬೆಂಗಳೂರಿನಲ್ಲಿ ಕರೆದಿರುವ ಸಭೆಗೆ ಯಾವ ಅರ್ಥವೂ ಇಲ್ಲ. ನಮ್ಮ ನಿಲುವು, ನಿರ್ಣಯದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಖಚಿತವಾಗಿ ಹೇಳಿದರು.

ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಅಭಿವೃದ್ಧಿ ಯೋಜನೆಗಳ ಜಾರಿಗೆ ನಮ್ಮ ಸಂಪೂರ್ಣ ವಿರೋಧವಿದೆ. ಅಣೆಕಟ್ಟು ಸುರಕ್ಷತಾ ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ ಇವೆಲ್ಲವೂ ಯೋಜನೆಗಳ ಜಾರಿಗೆ ವಿರುದ್ಧವಾಗಿವೆ. ಆದರೂ ರಾಜ್ಯಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಗಳ ಜಾರಿಗೆ ಮೊಂಡುತನ ಮಾಡುತ್ತಿರುವುದು ಸರಿಯಲ್ಲ. ಈ ಯೋಜನೆಗಳನ್ನು ಕೆಆರ್‌ಎಸ್ ಅಣೆಕಟ್ಟೆಯಿಂದ ದೂರ ಎಲ್ಲಿಯಾದರೂ ಜಾರಿಮಾಡಿಕೊಳ್ಳುವಂತೆ ಸ್ಪಷ್ಟವಾಗಿ ತಿಳಿಸಿದ್ದರೂ ಸರ್ಕಾರ ಕೆಆರ್‌ಎಸ್‌ನಲ್ಲೇ ಮಾಡಲು ಹೊರಟಿರುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದರು.

ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿಯನ್ನು ಜಿಲ್ಲೆಯ ಜನರಾಗಲೀ, ರೈತರಾಗಲೀ ಕೇಳಿರಲಿಲ್ಲ. ಈ ಯೋಜನೆಗಳಿಗೆ ಖರ್ಚು ಮಾಡುವ ಸಾವಿರಾರು ಕೋಟಿ ರು. ಹಣವನ್ನು ವಿತರಣಾ, ಸೀಳು, ಕಿರು ನಾಲೆಗಳ ಆಧುನೀಕರಣ, ಕೆರೆಗಳ ಅಭಿವೃದ್ಧಿ, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಉಪಯೋಗಿಸಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ. ರೈತರ ಮನವಿಯನ್ನು ಗಾಳಿಗೆ ತೂರಿ ಯೋಜನೆಗಳನ್ನು ಜಾರಿಗೊಳಿಸಲು ಹೊರಟಿರುವುದು ರೈತ ಮತ್ತು ಜನವಿರೋಧಿ ನೀತಿಯಾಗಿದೆ ಎಂದು ದೂಷಿಸಿದರು.

ತೊಂಬತ್ತು ವರ್ಷ ಹಳೆಯದಾದ ಅಣೆಕಟ್ಟು ಸುಭದ್ರತೆಯ ಬಗ್ಗೆ ಚೆಲ್ಲಾಟವಾಡುವುದು ಬೇಡ. ಈಗಾಗಲೇ ಪ್ರವಾಸಿಕೇಂದ್ರವಾಗಿ ಕೆಆರ್‌ಎಸ್ ವಿಶ್ವದ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಯೋಜನೆಗಳನ್ನು ಜಾರಿಗೆ ತಂದು ಅಲ್ಲಿನ ಪರಿಸರವನ್ನು ಹಾಳುಗೆಡವುವುದು ಬೇಡ. ಗಾಳಿ, ನೀರು, ಪರಿಸರ, ಕೃಷಿ ಯೋಗ್ಯ ಭೂಮಿಯನ್ನು ಹಾಳುಗೆಡವಿ ಮನರಂಜನೆಯನ್ನು ಮೆರೆಸುವುದು ಬೇಡ. ಯೋಜನೆಗಳ ವಿರುದ್ಧವಾಗಿ ರೈತ, ದಲಿತ, ಪ್ರಗತಿಪರ, ಕನ್ನಡ ಸಂಘಟನೆಗಳೆಲ್ಲವೂ ನಿರ್ಣಯ ಮಾಡಿ ಆಗಿದೆ. ಮತ್ತೆ ಅದನ್ನು ಪರಿಶೀಲಿಸುವ, ಪುನರ್‌ವಿಮರ್ಶಿಸುವ ಅಗತ್ಯವೇ ಇಲ್ಲ. ಹಾಗಾಗಿ ಸಚಿವರು ಕರೆದಿರುವ ಸಭೆಗೆ ಎಲ್ಲರೂ ಗೈರು ಹಾಜರಾಗುವುದಕ್ಕೆ ನಿರ್ಧರಿಸಿ ಒಮ್ಮತದ ತೀರ್ಮಾನ ಕೈಗೊಂಡರು.

ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಅವರು ದೂರವಾಣಿ ಮೂಲಕ ರೈತ ನಾಯಕಿ ಸುನಂದಾ ಜಯರಾಂ ಅವರೊಂದಿಗೆ ಮಾತನಾಡಿ ನಾವೂ ಕೂಡ ಸಭೆಗೆ ಹೋಗುತ್ತಿಲ್ಲ. ಯೋಜನೆಗಳ ವಿರುದ್ಧ ನಿರ್ಣಯ ಕೈಗೊಂಡಿದ್ದೇವೆ. ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೊರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸುಧೀರ್‌ ಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಜೈ ಕರ್ನಾಟಕ ಸಂಘಟನೆಯ ಎಸ್.ನಾರಾಯಣ್, ದಸಂಸದ ಕೃಷ್ಣ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಇತರರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ