ಸತತ ಎರಡನೇ ದಿನವೂ ವರುಣನ ಆರ್ಭಟ

KannadaprabhaNewsNetwork |  
Published : May 19, 2026, 02:15 AM IST
 | Kannada Prabha

ಸಾರಾಂಶ

ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ- ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ನಗರದ ಭೀಷ್ಮ ಕೆರೆ ಆವರಣದಲ್ಲಿ ಬೋಟಿಂಗ್‌ಗಾಗಿ ನಿರ್ಮಿಸಿದ್ದ ಶೆಡ್ ಹಾಗೂ ಸ್ವಾಗತ ಕಮಾನು ಗಾಳಿಯ ರಭಸಕ್ಕೆ ಕಿತ್ತು ಬಿದ್ದಿವೆ.

ಗದಗ: ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಸತತ ಎರಡನೇ ದಿನವೂ ಮಳೆಯ ಸಿಂಚನವಾಗಿದ್ದು, ಸೋಮವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಭಾನುವಾರ ಸುರಿದ ಮಳೆಯ ಮಾದರಿಯಲ್ಲೇ ಸೋಮವಾರವೂ ಜಿಲ್ಲಾದ್ಯಂತ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದರೂ ಬಿಸಿಲಿನ ತೀವ್ರತೆ ಮಾತ್ರ ಕಡಿಮೆಯಾಗಿರಲಿಲ್ಲ. ಆದರೆ ಸತತ ಎರಡು ದಿನಗಳಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡುಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ವಾತಾವರಣ ಬದಲಾವಣೆ: ಸೋಮವಾರ ಮಧ್ಯಾಹ್ನದವರೆಗೂ ಬಿಸಿಲಿನ ಬೇಗೆ ಮುಂದುವರಿದಿದ್ದರೂ ಸಂಜೆ ವೇಳೆಗೆ ದಟ್ಟ ಕಾರ್ಮೋಡ ಆವರಿಸತೊಡಗಿದವು. ಸಂಜೆ ಸುಮಾರು 4.30ರ ವೇಳೆಗೆ ನಗರಾದ್ಯಂತ ಕತ್ತಲೆ ಆವರಿಸಿದಂತ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆ ಆರಂಭವಾಯಿತು.

ಸಂಜೆ 4.30ರಿಂದ ಸುಮಾರು 6 ಗಂಟೆಯವರೆಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದಲ್ಲಿ ಪರದಾಡುವಂತಾಯಿತು.

ಹಲವೆಡೆ ಹಾನಿ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ- ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ನಗರದ ಭೀಷ್ಮ ಕೆರೆ ಆವರಣದಲ್ಲಿ ಬೋಟಿಂಗ್‌ಗಾಗಿ ನಿರ್ಮಿಸಿದ್ದ ಶೆಡ್ ಹಾಗೂ ಸ್ವಾಗತ ಕಮಾನು ಗಾಳಿಯ ರಭಸಕ್ಕೆ ಕಿತ್ತು ಬಿದ್ದಿವೆ.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಿಲ್ಲಿಸಿದ್ದ ಟಾಟಾ ಏಸ್ ವಾಹನದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ವಾಹನಕ್ಕೆ ಹಾನಿಯಾಗಿದೆ. ಗದಗ ಬಸ್ ಡಿಪೋ ಪ್ರವೇಶ ದ್ವಾರದ ಸಮೀಪವೂ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದ ಪರಿಣಾಮ ಕೆಲಕಾಲ ಬಸ್ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಇನ್ನೊಂದೆಡೆ ಗದಗ- ಬಾದಾಮಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಟಗೇರಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದಲ್ಲಿನ ಬೃಹತ್ ಮರವೊಂದು ರಸ್ತೆಬದಿಯ ಗೂಡಂಗಡಿಯ ಮೇಲೆ ಉರುಳಿಬಿದ್ದಿದ್ದು, ಅಂಗಡಿಗೆ ಹಾನಿಯಾಗಿದೆ.

ಹಲವೆಡೆ ವಿದ್ಯುತ್ ಕಂಬಗಳು ವಾಲಿ ಬಿದ್ದ ಪರಿಣಾಮ ಸೋಮವಾರವೂ ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಯವೈಶ್ಯ ಯುವಕರು ಮೂಲ ಉದ್ಯೋಗಕ್ಕೆ ಬರಲಿ: ಆರ್‌.ಪಿ. ರವಿಶಂಕರ
ನರೇಗಾ ಬದಲಾವಣೆಗೆ ಕೊಪ್ಪಳದಲ್ಲಿ ವಿರೋಧ, ಪ್ರತಿಭಟನೆ