ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣಾರ್ಭಟ: ಕೆಆರ್‌ಎಸ್‌ಗೆ 110 ಅಡಿಗೆ ಏರಿಕೆ

KannadaprabhaNewsNetwork | Published : Jul 17, 2024 12:54 AM

ಸಾರಾಂಶ

ಕಳೆದೆರಡು ದಿನಗಳಿಂದ ಕಾವೇರಿ ಉಗಮ ಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಹಾರಂಗಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ 35 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ. ಜಲಾಶಯದ ನೀರಿನ ಮಟ್ಟವೂ 110 ಅಡಿಗೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣಾರ್ಭಟದಿಂದ ಕಾವೇರಿ, ಹೇಮಾವತಿ, ಲೋಕಪಾವನಿ ನದಿಗಳೆಲ್ಲವೂ ಜೀವಕಳೆ ಪಡೆದುಕೊಂಡು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಶಯಗಳಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಕಳೆದೆರಡು ದಿನಗಳಿಂದ ಕಾವೇರಿ ಉಗಮ ಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಹಾರಂಗಿ ಜಲಾಶಯ ಭರ್ತಿಯಾಗಿ ಜಲಾಶಯದಿಂದ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ 35 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ. ಜಲಾಶಯದ ನೀರಿನ ಮಟ್ಟವೂ 110 ಅಡಿಗೆ ಏರಿಕೆಯಾಗಿದೆ.

ಸೋಮವಾರ ಬೆಳಗ್ಗೆ ಜಲಾಶಯಕ್ಕೆ 10,121 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, ಸಂಜೆ ವೇಳೆಗೆ 19,202 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಮಂಗಳವಾರ ಬೆಳಗ್ಗೆ 25,933 ಕ್ಯೂಸೆಕ್ ಗೆ ಏರಿಕೆಯಾಗಿತ್ತು. ಸಂಜೆಗೆ 35 ಸಾವಿರ ಕ್ಯೂಸೆಕ್ ಗೆ ಏರಿಕೆ ಸಾಧ್ಯತೆ ಇದೆ. ಕೇವಲ 24 ಗಂಟೆಯಲ್ಲಿ ಜಲಾಶಯದಲ್ಲಿ 2 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಜಲಾಶಯದ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿರುವುದು ರೈತ ಸಮೂಹದಲ್ಲಿ ಸಂತಸ ಮೂಡಿಸಿದೆ. ನಿರೀಕ್ಷೆಯಂತೆ ಮುಂಗಾರು ಮಳೆಯಾಗುತ್ತಿರುವುದರಿಂದ ಬೆಳೆಗಳಿಗೆ ನೀರು ಸಿಗುವ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಭತ್ತ, ಕಬ್ಬು, ರಾಗಿ ಬಿತ್ತನೆ ಕಾರ್ಯ ಆರಂಭಗೊಳ್ಳುವುದರಿಂದ ಬೆಳೆಗಳಿಗೆ ನೀರಿನ ಆಸರೆ ಸಿಗಬಹುದೆಂಬ ಆಶಾಭಾವನೆ ಇದೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 109.10 ಅಡಿ

ಒಳ ಹರಿವು – 35,997 ಕ್ಯುಸೆಕ್

ಹೊರ ಹರಿವು – 2357 ಕ್ಯುಸೆಕ್

ನೀರಿನ ಸಂಗ್ರಹ – 30.825 ಟಿಎಂಸಿ

ಸರ್ವಪಕ್ಷ ಸಭೆಗೆ ಎಚ್‌ಡಿಕೆ ಗೈರು: ಖಂಡನೆ

ಕನ್ನಡಪ್ರಭ ವಾರ್ತೆ ಮಂಡ್ಯಕಾವೇರಿ ವಿಷಯವಾಗಿ ಮುಖ್ಯಮಂತ್ರಿ ಕರೆದಿದ್ದ ಸರ್ವಪಕ್ಷ ಸಭೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗೈರು ಹಾಜರಾಗುವ ಮೂಲಕ ರೈತರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ. ಗಂಗಾಧರ್ ಆರೋಪಿಸಿದರು.

ಸರ್ವಪಕ್ಷ ಸಭೆ ನಡೆದ ದಿನ ಪಾಂಡವಪುರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾವೇರಿ ಸಮಸ್ಯೆಗಿಂತಲೂ ಅಭಿನಂದನಾ ಸಮಾರಂಭವೇ ಮುಖ್ಯವೆಂದು ತೋರ್ಪಡಿಸಿರುವುದನ್ನು ಖಂಡಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.ದೇವೇಗೌಡರು ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಮತ್ತು ಜಿಲ್ಲೆಯ ಹಿತಕ್ಕೆ ಸಭೆ ಕರೆದಾಗ ಧಾವಿಸಿ ಬರುತ್ತಿದ್ದರು. ಅವರ ಮಾರ್ಗದರ್ಶನದೊಂದಿಗೆ ಮುಂದೆ ರಾಜಕೀಯದಲ್ಲಿ ಕುಮಾರಸ್ವಾಮಿ ಅವರು ಹೆಜ್ಜೆ ಇಡಬೇಕಿದೆ. ಚುನಾವಣೆಗೆ ಮುನ್ನ ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿ ಈಗ ಶತಮಾನದ ಸಮಸ್ಯೆಯನ್ನು ತಿಂಗಳಲ್ಲಿ ಬಗೆಹರಿಸಲು ಸಾಧ್ಯವೇ ಎಂದು ಉಡಾಫೆ, ಉದಾಸೀನತೆಯಿಂದ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಸಂಸದರಾಗಿ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಕೂಡಲೇ ಸಮಿತಿಯ ಶಿಫಾರಸನ್ನು ಹಿಂಪಡೆಯಲು ಒತ್ತಾಯ ಮಾಡುವಂತೆ ಆಗ್ರಹಪಡಿಸಿದರು.ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ರಮೇಶ್‌ಮಿತ್ರ, ಜಯರಾಂ, ರುದ್ರಪ್ಪ, ರೇವಣ್ಣ ಇದ್ದರು.

Share this article