ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ನೊರನಕ್ಕಿ ಗ್ರಾಮ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಡೆಯಿತು.ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕು ದಂಡಾಧಿಕಾರಿ ವಿ.ಎಸ್. ನವೀನ್ ಕುಮಾರ್ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತರಾಣಿ ದಿನೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ವಸಂತ ರಾಣಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ನೂತನ ಅಧ್ಯಕ್ಷರ ಬೆಂಬಲಿಗರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದರು.
ವಸಂತ ರಾಣಿ ದಿನೇಶ್ ಅವರ ಬೆಂಬಲಿಗರು ಡಿಜೆ ಸೌಂಡ್‌ಗೆ ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ವಸಂತರಾಣಿ ದಿನೇಶ್ ಮಾತನಾಡಿ, ನನ್ನ ನೊರನಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮಂತ್ರಿ ಎಚ್ ಡಿ ರೇವಣ್ಣ, ಶಾಸಕರಾದ ಸೂರಜ್ ರೇವಣ್ಣರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.ನೊರನಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲ ಸೂಚಿಸಿದ ಗ್ರಾಮ ಪಂಚಾಯಿತಿ ಗೌರವಾನ್ವಿತ ಸದಸ್ಯರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸದಸ್ಯರ ಹಾಗೂ ಎಲ್ಲಾ ಮುಖಂಡರ ಸಲಹೆ, ಸಹಕಾರ ಪಡೆದು ಉತ್ತಮ ಆಡಳಿತವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ವಸಂತರಾಣಿ ದಿನೇಶ, ಜೆಡಿಎಸ್ ಮುಖಂಡರಾದ ಪುನರ್ವಿಕ ನವೀನ್, ಶ್ರೀನಿವಾಸಪುರ ದಿನೇಶ್, ಡೈರಿ ಮಂಜಣ್ಣ, ಸತೀಶ್, ಸೇರಿದಂತೆ ಇತರರು ಹಾಜರಿದ್ದರು.