ಸಂಸ್ಕೃತ ಅಧ್ಯಯನದಿಂದಾಗಿ ಅಪಾರಜ್ಞಾನಭಂಡಾರ ಪ್ರಾಪ್ತಿ: ಡಾ.ಶ್ರುತಿಕೀರ್ತಿ

KannadaprabhaNewsNetwork | Published : Jan 28, 2024 1:15 AM

ಸಾರಾಂಶ

ಭಾರತದ ಸಂಸ್ಕೃತಿಯನ್ನು ಋಷಿಮುನಿಗಳು ತಮ್ಮ ತಪಃಶಕ್ತಿಯಿಂದ ಸಂಸ್ಕೃತದಲ್ಲಿ ಅಳವಡಿಸಿದ್ದಾರೆ. ನಮ್ಮ ಸಂಸ್ಕೃತಿ ಅರಿವಾಗಬೇಕಾದರೆ ಸಂಸ್ಕೃತ ಅಧ್ಯಯನ ಅವಶ್ಯಕ ಎಂದು ಕುವೆಂಪು ವಿ.ವಿ.ಯ ಸಂಸ್ಕೃತ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಶ್ರುತಿಕೀರ್ತಿ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಸ್ಕೃತದಲ್ಲಿ ಏನಿದೆ ಅನ್ನುವುದಕ್ಕಿಂತ, ಏನಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಕುವೆಂಪು ವಿ.ವಿ.ಯ ಸಂಸ್ಕೃತ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ.ಶ್ರುತಿಕೀರ್ತಿ ಹೇಳಿದರು. ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿರುವ ಸಂಸ್ಕೃತ ಸ್ನಾತಕೋತ್ತರ ವಿಭಾಗದ ದ್ವಿತೀಯ ಎಂ.ಎ.ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಕೃತ ಒಂದು ದೊಡ್ಡ ಸಾಗರವಿದ್ದಂತೆ. ಸಾಗರದ ತಳಕ್ಕೆ ಹೋದಂತೆ ಹೇಗೆ ಮುತ್ತುಗಳು ಸಿಗುತ್ತವೆಯೋ ಹಾಗೇ, ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡಿದರೆ ಅಪಾರ ಜ್ಞಾನಭಂಡಾರ ಸಿಗುತ್ತದೆ ಎಂದರು.

ಭಾರತದ ಸಂಸ್ಕೃತಿಯನ್ನು ಋಷಿಮುನಿಗಳು ತಮ್ಮ ತಪಃಶಕ್ತಿಯಿಂದ ಸಂಸ್ಕೃತದಲ್ಲಿ ಅಳವಡಿಸಿದ್ದಾರೆ. ನಮ್ಮ ಸಂಸ್ಕೃತಿ ಅರಿವಾಗಬೇಕಾದರೆ ಸಂಸ್ಕೃತ ಅಧ್ಯಯನ ಅವಶ್ಯಕ. ಆಧ್ಯಾತ್ಮಿಕವಾಗಿ ಸಂಸ್ಕೃತ ಕಲಿಕೆಯಿಂದ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಅದರ ಅರ್ಥವನ್ನು ತಿಳಿಯುತ್ತದೆ. ವೇದ, ಗೀತೆ ಮತ್ತು ಉಪನಿಷತ್ತುಗಳಂತಹ ಹಲವಾರು ಹಿಂದೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪಠ್ಯಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಸಂಸ್ಕೃತದ ಜ್ಞಾನವು ಈ ಗ್ರಂಥಗಳನ್ನು ಉತ್ತಮವಾಗಿ ನಿಮಗೆ ಅರ್ಥವಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಂಸ್ಕೃತ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಡಾ. ಶೋಭಾ ಜಿ. ಭಟ್, ಡಾ.ಬಂಗಾರಮ್ಮ, ಡಾ.ಚೆನ್ನಕೇಶವ ಉಪಸ್ಥಿತರಿದ್ದರು.

ದ್ವಿತೀಯ ವರ್ಗದ ವಿದ್ಯಾರ್ಥಿಗಳಾದ ಭಾರತೀ ಶರ್ಮಾ ಪ್ರಾರ್ಥನೆ ಮಾಡಿದರು. ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ವೀರಭದ್ರಸ್ವಾಮಿ ಸ್ವಾಗತಿಸಿ, ಮರುಳಸಿದ್ದಸ್ವಾಮಿ ವಂದಿಸಿದರು.

- - - -26KPSMG15_396.JPG:

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಆವರಣದ ಸಂಸ್ಕೃತ ಸ್ನಾತಕೋತ್ತರ ವಿಭಾಗದ ದ್ವಿತೀಯ ಎಂ.ಎ. ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಕುವೆಂಪು ವಿ.ವಿ. ಸಂಸ್ಕೃತ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರಾದ ಡಾ. ಶ್ರುತಿಕೀರ್ತಿ ಮಾತನಾಡಿದರು. ಡಾ. ಶೋಭಾ ಜಿ. ಭಟ್, ಡಾ.ಬಂಗಾರಮ್ಮ, ಡಾ.ಚೆನ್ನಕೇಶವ ಇತರರು ಇದ್ದರು.

Share this article