ಸಚಿವ ಮಹದೇವಪ್ಪಗೆ ಲೋಕಸಭೆ ಟಿಕೆಟ್‌ ನೀಡದಂತೆ ವಾಸುದೇವ್ ಮನವಿ

KannadaprabhaNewsNetwork | Published : Feb 8, 2024 1:30 AM

ಸಾರಾಂಶ

ಮಹದೇವಪ್ಪ ಅವರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ದಲಿತ ಮತಗಳು ಚದುರಲಿವೆ. ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ.

ಹೊಸಪೇಟೆ: ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರಿಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಬಾರದು. ಅವರನ್ನು ರಾಜ್ಯದಲ್ಲಿ ಸಚಿವರನ್ನಾಗಿ ಮುಂದುವರಿಸಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಹಿತ ಕಾಪಾಡಲು ಅವಕಾಶ ಮಾಡಿಕೊಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಟಿ. ವಾಸುದೇವ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಡಾ. ಎಚ್‌.ಸಿ. ಮಹದೇವಪ್ಪ ಅವರು ದಲಿತ, ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಕಾಂಗ್ರೆಸ್‌ ರಾಜ್ಯ ಹಾಗೂ ಕೇಂದ್ರ ಸಮಿತಿಗಳು ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿ ಸಂಸತ್‌ಗೆ ಕಳುಹಿಸುವ ಕೆಲಸ ಮಾಡಬಾರದು. ಅವರು ರಾಜ್ಯದಲ್ಲೇ ಉಳಿಯಬೇಕು. ರಾಜ್ಯದ ದಲಿತ, ಹಿಂದುಳಿದ ವರ್ಗಗಳ ಕಲ್ಯಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಲೋಕಸಭೆಗೆ ಕಳುಹಿಸಲಾಯಿತು ಎಂಬ ಆಪಾದನೆ ಇದೆ. ಡಾ. ಜಿ. ಪರಮೇಶ್ವರ ಅವರನ್ನು 2013ರಲ್ಲಿ ವ್ಯೂಹ ರಚಿಸಿ ಸೋಲಿಸಲಾಯಿತು ಎಂಬ ಆಪಾದನೆಯೂ ಇದೆ. ಈಗ ಮಹದೇವಪ್ಪ ಅವರನ್ನು ಲೋಕಸಭೆಗೆ ಕಳುಹಿಸುವ ಷಡ್ಯಂತ್ರ ನಡೆಯುತ್ತಿದೆ. ಇಂತಹ ಷಡ್ಯಂತ್ರದಿಂದ ಅವರನ್ನು ಪಕ್ಷದ ಹೈಕಮಾಂಡ್‌ ಪಾರು ಮಾಡಬೇಕು. ಮಹದೇವಪ್ಪ ಅವರ ಬದಲಿಗೆ ಅವರ ಪುತ್ರನಿಗೆ ಟಿಕೆಟ್‌ ನೀಡಬೇಕು. ಒಂದು ವೇಳೆ ಮಹದೇವಪ್ಪ ಅವರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ದಲಿತ ಮತಗಳು ಚದುರಲಿವೆ. ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಕೂಡ ನಡೆಸಲಿವೆ ಎಂದರು.

ಮುಖಂಡರಾದ ಸಣ್ಣಮಾರೆಪ್ಪ, ತಮನಳೇಪ್ಪ, ಯರಿಸ್ವಾಮಿ, ರಾಮಲ್ಲಿ, ಎಚ್.ಸಿ. ರವಿ, ಜಯಣ್ಣ, ಬಿ. ಚಂದ್ರಶೇಖರ್, ಜೆ. ಶಿವಕುಮಾರ್, ಯಲ್ಲಪ್ಪ ಭಂಡಾರಧಾರ್ ಮತ್ತಿತರರಿದ್ದರು.

Share this article