ಮರಾಠಿ ಪುಂಡರ ವಿರುದ್ಧ 22ಕ್ಕೆ ಕರ್ನಾಟಕ ಬಂದ್‌ : ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ

KannadaprabhaNewsNetwork | Updated : Mar 01 2025, 07:39 AM IST

ಸಾರಾಂಶ

 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.22ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

 ಬೆಂಗಳೂರು : ಬೆಳಗಾವಿಯಲ್ಲಿ ಎಂಇಎಸ್‌ ಸಂಘಟನೆ ನಿಷೇಧಿಸಬೇಕು, ಮರಾಠ ಸಮುದಾಯ ಅಭಿವೃದ್ಧಿ ನಿಗಮ ರದ್ದು ಮಾಡಬೇಕು, ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲಿನ ಮರಾಠಿಗರ ಹಲ್ಲೆ ಖಂಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.22ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಬೆಳಗಾವಿ ನಮ್ಮದು. ಮರಾಠ ಪುಂಡರು ಮತ್ತು ಎಂಇಎಸ್ ಗೂಂಡಾಗಳ ವಿರುದ್ಧ ಕನ್ನಡಪರ ಸಂಘಟನೆಗಳ ಹೋರಾಟ ಮುಂದುವರೆಯಲಿದೆ. ಕೂಡಲೇ ರಾಜ್ಯ ಸರ್ಕಾರ ಶಿವಸೇನೆಯನ್ನು ಗಡೀಪಾರು ಮಾಡಬೇಕು. ರಾಜ್ಯದಲ್ಲಿ ಎಂಇಎಸ್‌ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಒಕ್ಕೂಟದಿಂದ ಮಾರ್ಚ್‌ ತಿಂಗಳು ಪೂರ್ತಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಮಾ.3ರ ಬೆಳಗ್ಗೆ 11ಕ್ಕೆ ರಾಜಭವನ ಮುತ್ತಿಗೆ ಹಾಕಲಾಗುವುದು. ಮಾ.7 ಕ್ಕೆ ಬೆಳಗಾವಿ ಚಲೋ ಮೂಲಕ ಸಾವಿರಾರು ಕನ್ನಡಿಗರ ಜತೆ ಬೆಳಗಾವಿಗೆ ಹೋಗುತ್ತೇವೆ. ಮಾ.11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ- ತಮಿಳುನಾಡು ಗಡಿ ಬಂದ್ ಮಾಡಲಿದ್ದೇವೆ. ಮಾ.14ರಂದು ರಾಮನಗರ-ಮಂಡ್ಯ- ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತೇವೆ. ಮಾ.17ರಂದು ಹೊಸಕೋಟೆ– ಚೆನ್ನೈ ಹೆದ್ದಾರಿ ತಡೆಯುತ್ತೇವೆ. ಮಾ.18ರಂದು ಕನ್ನಡಪರ ಸಂಘಟನೆಗಳ ಸಭೆ ಮತ್ತು ಮಾ.22ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡಸಲಾಗುವುದು ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಕನ್ನಡಿಗರ ಮೇಲೆ ಮರಾಠಿಗರ ಹಲ್ಲೆ ಪ್ರಕರಣವೊಂದನ್ನು ಇಟ್ಟುಕೊಂಡು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಬಂದ್‌ ನಡೆಸಲು ತೀರ್ಮಾನಿಸಿದ್ದೇವೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ರದ್ದು ಮಾಡಬೇಕು. ಕರ್ನಾಟಕದಲ್ಲಿ ಶೇ.90ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಕಾನೂನು ರೂಪಿಸಬೇಕು ಎಂಬ ಬೇಡಿಕೆ ನಮ್ಮದು ಎಂದರು.

ಕುಡಿಯುವ ನೀರು ಯೋಜನೆಯ ಮಹದಾಯಿ- ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಾಗಿ ಮತ್ತು ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ. ಇಂದಿನಿಂದಲೇ ರಾಜ್ಯಾದ್ಯಂತ ಪ್ರವಾಸ ನಡೆಸಿ ಎಲ್ಲ ಜಿಲ್ಲೆಗಳ ರೈತ ಸಂಘ, ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲ ಸಂಘಟನೆಗಳ ಬೆಂಬಲ ಕೋರಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಕುಮಾರ್, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಗಿರೀಶ್ ಗೌಡ, ರೂಪೇಶ್ ರಾಜಣ್ಣ ಸೇರಿ ಅನೇಕ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು. 

ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಷಯದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಕನ್ನಡ ಚಲನಚಿತ್ರೋದ್ಯಮ ಅದರಲ್ಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಾ ಬೆಂಬಲ ಸೂಚಿಸುತ್ತಾ ಬಂದಿದೆ. ಕನ್ನಡ ಒಕ್ಕೂಟ ನಡೆಸಲು ಉದ್ದೇಶಿಸಿರುವ ಬಂದ್‌ಗೆ ನಮ್ಮ ಬೆಂಬಲ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.  

ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಬೆಳಗಾವಿಯಲ್ಲಿ ಈಗಾಗಲೇ ಬಸ್‌ ನಿರ್ವಾಹಕರ ಮೇಲಿನ ಕೇಸ್‌ ಹಿಂಪಡೆಯಲಾಗಿದೆ. ಕೇಸು ಹಾಕಿದ ಇನ್ಸ್‌ಪೆಕ್ಟರ್‌ನನ್ನು ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಬೆಳಗಾವಿ ಶಾಂತವಾಗಿದೆ.

- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರವೇ

Share this article