ಕನ್ನಡಪ್ರಭ ವಾರ್ತೆ ರಾಮನಗರಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಕನ್ನಡ ಮಾಧ್ಯಮ ಶಾಲೆಗಳು ಪ್ರಾರಂಭವಾಗಬೇಕಾದರೆ ಅನೇಕ ಕಟ್ಟಳೆಗಳು ಅಲ್ಲದೆ, ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ. ಜೊತೆಗೆ ಶಿಕ್ಷಕರ ಕೊರತೆಯೂ ಕಾಡುತ್ತಿದೆ ಎಂದು ದೂರಿದರು.ಖಾಸಗಿ ಕನ್ನಡ ಶಾಲೆಗಳಿಗೆ ಕಳೆದ 29 ವರ್ಷಗಳಿಂದ ಅನುದಾನ ನೀಡುತ್ತಿಲ್ಲ. 10 ವರ್ಷಗಳಿಂದ ಸುಮಾರು 10 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಕನ್ನಡಿಗರಿಗೆ ಉದ್ಯೋಗ ಕೇಳುವವರೇ ಇಲ್ಲದಂತಾಗಿದೆ ಎಂದು ಟೀಕಿಸಿದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡಕ್ಕೆ ಕರ್ನಾಟಕದಲ್ಲಿಯೇ ಸ್ಥಾನ ಸಿಗುತ್ತಿಲ್ಲ. ಅಂದ ಮೇಲೆ ನೆರೆಯ ರಾಜ್ಯಗಳಲ್ಲಿ ಸಿಗಲು ಸಾಧ್ಯವೇ. ಖಾಸಗಿ ಶಿಕ್ಷಣ ಸಂಸ್ಥೆಗಳು ನೂರಕ್ಕೆ ನೂರಷ್ಟು ಕನ್ನಡ ವಿರೋಧಿಗಳು. ಕನ್ನಡ ಮತ್ತು ಕನ್ನಡ ಮಾಧ್ಯಮ ಬಗ್ಗೆ ಆ ಸಂಸ್ಥೆಗಳಿಗೆ ಗೌರವ ಇಲ್ಲ. ಉರ್ದು ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರೇ ಇಲ್ಲ. ಹೀಗಿರುವಾಗ ರಾಜ್ಯಸರ್ಕಾರ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಭಾಷೆ ಕಲಿಸಲು ಹೊರಟಿದೆ ಎಂದು ದೂರಿದರು.ಖಾಸಗಿ ಕನ್ನಡ ಶಾಲೆಗಳಿಗೆ 29 ವರ್ಷಗಳಿಂದ ಅನುದಾನ ನೀಡುತ್ತಿಲ್ಲ. ಇದು ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬದುಕಿದ್ದು, ಸತ್ತಂತಿದೆ. ಕನ್ನಡ ಪರ ಸಂಘಟನೆಗಳ ಜೊತೆಗೂಡಿ ಕನ್ನಡ ಮಾಧ್ಯಮ ಉಳಿವಿಗಾಗಿ ಕರ್ನಾಟಕ ಬಂದ್ ನಂತಹ ಉಗ್ರ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಸಿದರು.ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ಮುಖಂಡರಾದ ಯತೀಶ್, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ. ಜಯರಾಮ, ತಾಲೂಕು ಕಾರ್ಯದರ್ಶಿ ಕೋಟಿಪುರ ಪಿ.ಸುರೇಶ್, ಬಿಡದಿ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯಸುಧಾ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕದ ಅಧ್ಯಕ್ಷ ಪ್ರಸನ್ನ, ರಾಜೀವ್ ಗಾಂಧಿ ಪುರದ ಅಧ್ಯಕ್ಷರಾದ ಹೇಮಾವತಿ, ಉಪಾಧ್ಯಕ್ಷರಾದ ಮಹೇಂದ್ರಮ್ಮ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ಗಿರೀಶ್ ಗೌಡ, ವಾಟಾಳ್ ಪಕ್ಷದ ನಾರಾಯಣಸ್ವಾಮಿ, ಮಹದೇವಯ್ಯ ಮತ್ತಿತರರು ಭಾಗವಹಿಸಿದ್ದರು.--ಸಿದ್ದುರನ್ನು ಮೂಲೆಗುಂಪು ಮಾಡುವ ಹುನ್ನಾರ