ರಾಮನಗರ: ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನವನ್ನಾಗಿ ಆಚರಿಸಿದರು.
ನಗರದ ಐಜೂರು ವೃತ್ತದಲ್ಲಿ ಹಳೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೇರಿದ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯಪಾಲರ ಬಗ್ಗೆ ನಮಗೆ ಗೌರವ ಇದೆ. ಆದರೆ, ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ನಮ್ಮ ವಿರೋಧವೂ ಇದೆ. ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಹಿಂದಿಯನ್ನು ಹೇರುವ ಚಿಂತನೆಯ ಭಾಗವಾಗಿದೆ. ಜಂಟಿ ಅಧಿವೇಶನದಲ್ಲಿ ಯಾರೊಬ್ಬರು ಇದನ್ನು ಪ್ರಶ್ನೆ ಮಾಡದಿರುವುದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಟಾಳ್ ನಾಗರಾಜ್ ಮಾತನಾಡಿ, ಜಂಟಿ ಅಧಿವೇಶನದಲ್ಲಿ ಎರಡು ಸದನಗಳ ಸದಸ್ಯರು ಒಟ್ಟಿಗೆ ಸೇರಿದ್ದು, ಅಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರು ಇದ್ದರು. ಅವರಲ್ಲಿ ಒಬ್ಬರಾದರು ಎದ್ದು ನಿಂತು ರಾಜ್ಯಪಾಲರ ಭಾಷಣ ಕನ್ನಡದಲ್ಲಿ ಆಗಬೇಕೆಂದು ಕೇಳಲಿಲ್ಲ. ಕನ್ನಡದ ಬಗ್ಗೆ ಇವರೆಲ್ಲರು ಎಷ್ಟು ಗೌರವ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.ಮುಖ್ಯಮಂತ್ರಿಗಳು ಹಾಗೂ ಸಭಾಪತಿಗಳು ಹಿಂದಿ ಬಾಷಣಕ್ಕೆ ಅವಕಾಶ ನೀಡಬಾರದಿತ್ತು. ಇದೇ ಬೇರೆ ರಾಜ್ಯಗಳಲ್ಲಿ ಆಗಿದ್ದರೆ ಎಲ್ಲರೂ ರಾಜ್ಯಪಾಲರ ಭಾಷಣವನ್ನೇ ಬಹಿಷ್ಕಾರ ಮಾಡುತ್ತಿದ್ದರು. ಅಧಿವೇಶನದಲ್ಲಿದ್ದ 224 ಶಾಸಕರು, 75 ವಿಧಾನ ಪರಿಷತ್ ಸದಸ್ಯರ ಪೈಕಿ 20 ಮಂದಿಗೆ ಮಾತ್ರ ರಾಜ್ಯಪಾಲರ ಭಾಷಣ ಅರ್ಥವಾಗಿರಬೇಕು. ಉಳಿದವರಿಗೆ ಏನೂ ಅರ್ಥವಾಗಿಲ್ಲ. ಇದು ರಾಜ್ಯ ಮತ್ತು ಕನ್ನಡ, ಕನ್ನಡಿಗರಿಗೆ ಮಾಡಿದ ಅಪಾಮಾನ. ಮಾ.22ರ ಕರ್ನಾಟಕ ಬಂದ್ ದಿನದಂದು ರಾಜ್ಯಪಾಲರ ಹಿಂದಿ ಭಾಷಣವನ್ನು ವಿರೋಧ ಮಾಡುತ್ತೇವೆ. ಯಾರೇ ರಾಜ್ಯಪಾಲರಾಗಲಿ ಅವರ ಭಾಷೆಯಲ್ಲಿ ಬರೆದುಕೊಂಡು ಕನ್ನಡದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದರು.
ಮಾ.22ರಂದು ಅಖಂಡ ಕರ್ನಾಟಕ ಬಂದ್ ಗೆ ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸುಮಾರು 2 ಸಾವಿರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮಾ. 8ರಂದು ಅತ್ತಿಬೆಲೆ ಬಂದ್ ಮಾಡುವ ಮೂಲಕ ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಧೋರಣೆಯನ್ನು ಖಂಡಿಸುತ್ತೇವೆ ಎಂದರು.ಈ ಬಂದ್ ಅನ್ನು ಚಾಲಕರಿಗಾಗಿ ಮಾಡುತ್ತಿದ್ದೇವೆ. ಚಾಲಕರ ಗೌರವ ಹೆಚ್ಚಿಸುವ, ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಮರಾಠಿಯವರು ಚಾಲಕನನ್ನು ಹೊಡೆದು ಕಪ್ಪು ಮಸಿ ಬಳಿದು ಅಪಮಾನ ಮಾಡಿದ್ದಾರೆ. ಇದು ರಾಜ್ಯದ ಚಾಲಕರಿಗೆ ಆದಾದಂತಹ ಅಪಮಾನ. ಬಂದ್ ದಿನದಂದು ಸಾರಿಗೆ ಬಸ್ ಗಳ ಚಾಲಕರು ಮಾತ್ರವಲ್ಲದೆ ಎಲ್ಲ ಚಾಲಕರು ವಾಹನಗಳನ್ನು ಹತ್ತಬಾರದು ಎಂದು ವಾಟಾಳ್ ನಾಗರಾಜು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ , ತಾಲೂಕು ಅಧ್ಯಕ್ಷ ಗಂಗಾಧರ್ , ಯುವಕ ಘಟಕ ಅಧ್ಯಕ್ಷ ಆರ್ .ಜೆ.ಅರ್ಜುನ್ , ದಲಿತ ಘಠಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯಸುಧಾ,ಬಿಡದಿ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಕೆಂಪರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕ ಅಧ್ಯಕ್ಷ ಪ್ರಸನ್ನ, ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.
5ಕೆಆರ್ ಎಂಎನ್ 4.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.