ಸೌದೆ ಒಲೆ ಮೂಲಕ ಹಂಡೆಯಲ್ಲಿ ನೀರು ಕಾಯಿಸಿ ವಾಟಾಳ್ ಪ್ರತಿಭಟನೆ

KannadaprabhaNewsNetwork | Published : Apr 11, 2025 12:37 AM

ಸಾರಾಂಶ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ದರ ಏರಿಕೆ ಮಾಡಿವೆ. ಹಾಲು, ವಿದ್ಯುತ್, ಡೀಸೆಲ್, ಸಿಲಿಂಡರ್ ದರಗಳ ದರ ಏರಿಕೆ ಆಗಿದೆ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಸಾಂಕೇತಿಕವಾಗಿ ಸೌದೆ ಒಲೆ ಮೂಲಕ ಹಂಡೆಯಲ್ಲಿ ನೀರು ಕಾಯಿಸಿ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ದರ ಏರಿಕೆ ಮಾಡಿವೆ. ಹಾಲು, ವಿದ್ಯುತ್, ಡೀಸೆಲ್, ಸಿಲಿಂಡರ್ ದರಗಳ ದರ ಏರಿಕೆ ಆಗಿದೆ ಎಂದು ಟೀಕಿಸಿದರು.

ಇದೀಗ ಬೆಲೆ ಏರಿಕೆ ವಿರುದ್ಧ ಬಿಜೆಪಿ- ಕಾಂಗ್ರೆಸ್ ಪರಸ್ಪರ ಹೋರಾಟ ಮಾಡುತ್ತಿವೆ. ಇದು ಭ್ರಷ್ಟಾಚಾರಿಗಳ ವಿರುದ್ಧ ಭ್ರಷ್ಟಾಚಾರಿಗಳೇ ಹೋರಾಟ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಲೆ ಏರಿಕೆಯನ್ನು ಇಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದರು.

ಎತ್ತಿನಗಾಡಿ ಚಳವಳಿ ಮಾಡುವ ಮೂಲಕ ಬಿಜೆಪಿಯ ಯಡಿಯೂರಪ್ಪ ಅವರ ಕಂಪನಿ ಕಾಪಿರೈಟ್ ಮಾಡಿದೆ. ಬಿಜೆಪಿಯಲ್ಲಿ ವಿನೂತನವಾಗಿ ಚಳವಳಿ ಇದ್ದರೆ ಮಾಡಲಿ. ಎತ್ತಿನಗಾಡಿ ಚಳವಳಿಯನ್ನು ನಾನು ಈ ಹಿಂದೆಯೇ ಮಾಡಿದ್ದೇನೆ ಎಂದರು.

ವಾಟಾಳ್ ಬಂಧನ: ಪ್ರತಿಭಟನೆ ವೇಳೆ ಸೌದೆ ಒಲೆ ಹಾಕಿ ಬಿಸಿ ನೀರು ಕಾಯಿಸಲು ಮುಂದಾದರು. ಆದರೆ, ಸೌಧೆ ಒಲೆ ಹಚ್ಚಲು ಪೊಲೀಸರು ತಡೆದು, ವಾಟಾಳ್ ನಾಗರಾಜು ಹಾಗೂ ಹೋರಾಟಗಾರರನ್ನು ಬಂಧಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾದ್ಯಕ್ಷ ಜಗದೀಶ್ ಐಜೂರು. ಮುಖಂಡರಾದ ಗಂಗಾಧರ್, ಜಯಕುಮಾರ್, ಭಾಗ್ಯ ಸುಧಾ, ಅರ್ಜುನ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

Share this article