ಮಳೆಗಾಗಿ ಹಾಸನದಲ್ಲಿ ಮೊಳಗಿದ ವೇದಘೋಷ

KannadaprabhaNewsNetwork |  
Published : Jul 31, 2026, 02:00 AM IST
 ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಬುಧವಾರ ನಾಲ್ಕು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ | Kannada Prabha

ಸಾರಾಂಶ

ರಾಜ್ಯಾದ್ಯಂತ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿದ್ದು, ನದಿಗಳು, ಕೆರೆಕಟ್ಟೆಗಳು ಹಾಗೂ ಜಲಾಶಯಗಳ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿರುವ ಹಿನ್ನೆಲೆ ಉತ್ತಮ ಮಳೆಯಾಗಲಿ, ಪ್ರಕೃತಿ ಸಮತೋಲನ ಮರುಸ್ಥಾಪನೆಯಾಗಲಿ ಹಾಗೂ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಬುಧವಾರ ನಾಲ್ಕು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯಾದ್ಯಂತ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಅನುಭವಿಸುತ್ತಿದ್ದು, ನದಿಗಳು, ಕೆರೆಕಟ್ಟೆಗಳು ಹಾಗೂ ಜಲಾಶಯಗಳ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿರುವ ಹಿನ್ನೆಲೆ ಉತ್ತಮ ಮಳೆಯಾಗಲಿ, ಪ್ರಕೃತಿ ಸಮತೋಲನ ಮರುಸ್ಥಾಪನೆಯಾಗಲಿ ಹಾಗೂ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಬುಧವಾರ ನಾಲ್ಕು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಪರ್ಜನ್ಯ ಜಪ, ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ಹಲವು ವೇದೋಕ್ತ ಪೂಜೆಗಳು ವೈದಿಕ ಸಂಪ್ರದಾಯದಂತೆ ನೆರವೇರಿದವು. ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ವೇದಪಂಡಿತರ ಮಂತ್ರೋಚ್ಚಾರಣೆ, ವೇದಘೋಷ ಮತ್ತು ಹೋಮದ ಹೊಗೆಯಿಂದ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಉತ್ತಮ ಮಳೆ, ರೈತರ ಒಳಿತು ಹಾಗೂ ಲೋಕಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ನೀರಿನೊಳಗೆ ನಿಂತು ಪರ್ಜನ್ಯ ಜಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವೇದಪಂಡಿತರು ನೀರು ತುಂಬಿದ ಕೊಳದಲ್ಲಿ ಕುತ್ತಿಗೆಯವರೆಗೂ ನೀರಿನಲ್ಲಿ ನಿಂತು ಹಾಗೂ ಕುಳಿತು ಪರ್ಜನ್ಯ ಜಪ ನಡೆಸಿದರು. ವೇದೋಕ್ತ ವಿಧಾನದಂತೆ ಜಲಮಧ್ಯದಲ್ಲಿ ನಿರಂತರ ಮಂತ್ರೋಚ್ಚಾರಣೆ ನಡೆಸಿದ ದೃಶ್ಯ ಭಕ್ತರಲ್ಲಿ ವಿಶೇಷ ಭಕ್ತಿಭಾವ ಮೂಡಿಸಿತು. ಪರ್ಜನ್ಯ ದೇವರ ಅನುಗ್ರಹದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಬರದ ಪರಿಸ್ಥಿತಿ ದೂರವಾಗಲಿ ಎಂಬ ಉದ್ದೇಶದಿಂದ ಈ ವಿಶೇಷ ಜಪವನ್ನು ನಡೆಸಲಾಯಿತು. ಬಳಿಕ ಹೋಮದ ಪೂರ್ಣಾಹುತಿ ನೆರವೇರಿಸಿ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಅಧ್ಯಕ್ಷ ನಿಟ್ಟೂರು ಜಯರಾಮ್ ಹಾಗೂ ನರಸಿಂಹ ಶರ್ಮ ಮಾತನಾಡಿ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯಗಳು, ಕೆರೆಗಳು ಹಾಗೂ ನದಿಗಳ ನೀರಿನ ಮಟ್ಟ ಕುಸಿದಿರುವುದರಿಂದಕುಡಿಯುವ ನೀರು ಹಾಗೂ ಕೃಷಿಗೆ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕೃತಿ ಸಮತೋಲನ ಮರುಸ್ಥಾಪನೆಯಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕು ಎಂಬ ಉದ್ದೇಶದಿಂದ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ರಾಮನಾಥಪುರದ ಕಾವೇರಿ ನದಿಯಲ್ಲಿ ಪರ್ಜನ್ಯ ಹೋಮಸಂಕಲ್ಪವನ್ನು ನೆರವೇರಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಹಾಸನದಲ್ಲಿ ಬುಧವಾರದಿಂದ ಆಗಸ್ಟ್ 1ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಹೋಮ, ಜಪ, ಅಭಿಷೇಕ ಹಾಗೂ ಧಾರ್ಮಿಕಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಸ್ತ ಲೋಕದ ಕಲ್ಯಾಣ, ಪರಿಸರ ಸಂರಕ್ಷಣೆ, ಉತ್ತಮ ಮಳೆ ಹಾಗೂ ಜನರ ನೆಮ್ಮದಿಗಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಪರ್ಜನ್ಯ ಜಪ, ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಮಹನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಯುತ್ತಿರುವುದು ಅಪರೂಪದ ಸಂಗತಿಯಾಗಿದೆ. ವೇದ ಮತ್ತು ಪುರಾಣಗಳಲ್ಲಿ ಪರ್ಜನ್ಯ ಜಪ ಹಾಗೂ ಹೋಮಕ್ಕೆ ವಿಶೇಷ ಮಹತ್ವ ನೀಡಲಾಗಿದ್ದು, ಇಂತಹ ಯಾಗ- ಯಜ್ಞಗಳಿಂದ ಪ್ರಕೃತಿಯ ಅನುಗ್ರಹ ಲಭಿಸುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಆಚರಣೆಗಳ ಮೂಲಕ ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಗಟ್ಟಿಗೊಳಿಸುವ ಸಂದೇಶವೂ ಇದರಲ್ಲಿ ಅಡಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ನರಸಿಂಹ ಶರ್ಮ, ಉಪಾಧ್ಯಕ್ಷೆ ಮಂಜುಳಾ ಅಯ್ಯಂಗಾರ್, ಮುಖಂಡರಾದ ರಮೇಶ್, ಶ್ರೀಧರ್ಸೇರಿದಂತೆ ಮಹಾಸಂಘದ ಪದಾಧಿಕಾರಿಗಳು, ವೇದಪಂಡಿತರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳೆದು ಹೋದ ಮೊಬೈಲ್ ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸರ ಸಾಧನೆ
ರೈತರ ಹೊಲದಲ್ಲಿ ಧರಣಿ ನಡೆಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್