ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಾರಂಪರಿಕ ನೇಕಾರಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿರುವ ನೇಕಾರ ವರ್ಗದವರು ಆರ್ಥಿಕವಾಗಿ ಸಬಲರಲ್ಲದಿದ್ದರೂ ಅವರು ಕಲಾ ಪ್ರವೀಣರು ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಭಾನುವಾರ ಪಟ್ಟಣದ ಕೆಳಗಿನ ಪೇಟೆಯ ಶ್ರೀ ಕುರುಹಿನಶೆಟ್ಟಿ ನೀಲಕಂಠೇಶ್ವರ ದೇವಸ್ಥಾನ ಜೀಣೋದ್ಧಾರ ಟ್ರಸ್ಟ್ ಸಮಿತಿ ವತಿಯಿಂದ ನೀಲಕಂಠೇಶ್ವರ ದೇವಸ್ಥಾನ ಕಾರ್ತಿಕೋತ್ಸವದ ನಿಮಿತ್ತ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಡಾನ್ಸ್ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ನೇಕಾರರ ಬದುಕು ತುಂಬಾ ಚಿಂತಾಜನಕವಾಗಿದೆ. ಗುಳೇದಗುಡ್ಡದ ಖಣದ ಬೇಡಿಕೆ ಕಡಿಮೆಯಾಗಿ ಇಲ್ಲಿನ ನೇಕಾರ ವರ್ಗ ಸಂಕಷ್ಟದಲ್ಲಿದೆ. ಆದರೂ ಜಾತ್ರೆ, ಉತ್ಸವಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಈಚೆಗೆ ಮಹಿಳೆಯರ ಪಾರಂಪರಿಕ ಉಡುಗೆ ಕುಪ್ಪಸಕ್ಕೆ ಬಳಸುವ ಖಣದ ಬಳಕೆ ಕಡಿಮೆಯಾಗಿದೆ, ಆದ್ದರಿಂದ ಅದನ್ನು ಸನ್ಮಾನದ ಶಾಲು, ದಿಂಬಿನ ಹೊದಿಕೆ, ಹೆಣ್ಣುಮಕ್ಕಳ ಫ್ಯಾಷನ್ ಉಡುಗೆಗಾಗಿ ಬಳಸಿ, ತಮ್ಮ ಕಲಾತ್ಮಕತೆಯಿಂದ ಬದುಕಿನ ದಾರಿ ಕಂಡುಕೊಳ್ಳುತ್ತಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಣದ ಉತ್ಪನ್ನಗಳು ಮಾರಾಟವಾಗಬೇಕು. ನೇಕಾರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಬೇಕು. ನೇಕಾರಿಕೆಯಲ್ಲಿಯೇ ಕುರುಹಿನಶೆಟ್ಟಿ ಸಮುದಾಯ ಶ್ರಮಸಂಸ್ಕೃತಿಗೆ ಹೆಸರಾದವರು. ಹಿಂದಿನಿಂದ ಬಂದಿರುವ ಪಾರಂಪರಿಕ ವೃತ್ತಿ, ಸಂಸ್ಕೃತಿ, ಆಚರಣೆಗಳು ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ಇಂದಿನ ಯುವಪೀಳಿಗೆ ನಮ್ಮ ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ನಮ್ಮ ಭಾರತೀಯ ಮಹಿಳೆಯರು ದೇಶಿಯತೆ ಬೆಳೆಸಬೇಕಿದೆ ಎಂದರು.ಕುರುಹಿನಶೆಟ್ಟಿ ಸಮಾಜದ ಜಗದ್ಗುರು ಶಿವಶಂಕರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ನೇಕಾರಿಕೆಯಲ್ಲಿ ತಾಂತ್ರಿಕತೆ ಅಳವಡಿಸಿ ಆಧುನಿಕತೆಗೆ ತಕ್ಕಂತೆ ನೇಕಾರಿಕೆಯ ವಿನ್ಯಾಸದಲ್ಲಿ ನೇಕಾರರು ಬದಲಾಗಬೇಕು. ಪಾರಂಪರಿಕ ಕಲೆ ಉಳಿಸಬೇಕು ಎಂದರು.
ಟ್ರಸ್ಟ್ ಸಮಿತಿ ಅಧ್ಯಕ್ಷ ತಿರುಗುಣೆಪ್ಪ ಗಾಳಿ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ, ರಂಗೋಲಿ ಸ್ಪರ್ಧೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹೆಸ್ಕಾಂ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಪೋಚಗುಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಸೇವಾಭಾರತಿ ಅಧ್ಯಕ್ಷ ಸಂಜೀವ ಕಾರಕೂನ, ಸಂಗಮೇಶ ಹುನಗುಂದ, ಡಾ.ನಾಗೇಶ ಶ್ಯಾವಿ, ವೀರಣ್ಣ ಕುರಹಟ್ಟಿ, ಶರಣಪ್ಪ ಬೆಕಿನಾಳ ವೇದಿಕೆ ಮೇಲಿದ್ದರು. ಕಾರ್ಯಕ್ರಮದ ನಂತರ ಡಾನ್ಸ್ ಡಾನ್ಸ್ ಕಾರ್ಯಕ್ರಮ ಮಕ್ಕಳಿಂದ ಜರುಗಿತು.