ಕನ್ನಡ ಸಾಹಿತ್ಯ ಲೋಕಕ್ಕೆ ವೀರಪ್ಪ ವಿಶೇಷ ಕೊಡುಗೆ

KannadaprabhaNewsNetwork |  
Published : Jul 09, 2024, 12:46 AM IST
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಎನ್.ಜಿ. ಮಹಾದೇವಪ್ಪ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವೀರಪ್ಪ ನಾಗಶೆಟ್ಟಿ ಅವರು ಮುಲ್ಕಿ ಪರೀಕ್ಷೆ ಪಾಸಾಗಿ ಒಬ್ಬ ಶ್ರೇಷ್ಠ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಅಂದಿನ ಶಿಕ್ಷಣ ಕ್ಷೇತ್ರಕ್ಕೆ ಆದರ್ಶವಾಗಿ ಶಿಕ್ಷಕರಿಗೆ ಮಾರ್ಗದರ್ಶಕರಾದರು. ಅವರ ಜ್ಞಾನ ಅಪರಿಮಿತವಾಗಿತ್ತು. ಕನ್ನಡ, ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್‌ ಈ ನಾಲ್ಕು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು.

ಧಾರವಾಡ:

ಬಹುಭಾಷಾ ಪಂಡಿತರಾಗಿದ್ದ ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ ೨೦ನೆಯ ಶತಮಾನದ ಆರಂಭದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದವರು ಎಂದು ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಹೇಳಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘ ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿದತ್ತಿ ಅಂಗವಾಗಿ ಆಯೋಜಿಸಿದ್ದ ‘ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗಶೆಟ್ಟಿ ಅವರು ಮುಲ್ಕಿ ಪರೀಕ್ಷೆ ಪಾಸಾಗಿ ಒಬ್ಬ ಶ್ರೇಷ್ಠ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಅಂದಿನ ಶಿಕ್ಷಣ ಕ್ಷೇತ್ರಕ್ಕೆ ಆದರ್ಶವಾಗಿ ಶಿಕ್ಷಕರಿಗೆ ಮಾರ್ಗದರ್ಶಕರಾದರು. ಅವರ ಜ್ಞಾನ ಅಪರಿಮಿತವಾಗಿತ್ತು. ಕನ್ನಡ, ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್‌ ಈ ನಾಲ್ಕು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಆಗಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಭಾಷೆಗಳ, ಶಾಸ್ತ್ರಗಳ ಅಧ್ಯಯನ ಮುಖ್ಯವಾಗಿತ್ತು. ಅದರ ಫಲವಾಗಿ ವೀರಪ್ಪ ಅವರು ಸೃಜನಶೀಲ ಲೇಖಕರಾಗಿ, ಅನುವಾದಕರಾಗಿ, ಬರಹಗಾರರಾಗಿ, ಕನ್ನಡ ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ ಎಂದರು.

‘ವೀರಪ್ಪ ನಾಗಶೆಟ್ಟಿಯವರ ಬದುಕು-ಬರಹ’ ವಿಷಯ ಕುರಿತಂತೆ ನಿವೃತ್ತ ಉಪನ್ಯಾಸಕ ವೀರಣ್ಣ ಅಗಳಗಟ್ಟಿ ಮಾತನಾಡಿ, ವೀರಪ್ಪ ನಾಗಶೆಟ್ಟಿ ಅವರ ಬದುಕು ಸಮಾಜಕ್ಕೆ ಮಾದರಿಯ ಬದುಕು. ಅವರಲ್ಲಿ ಸಮಾಜದ ಬಗ್ಗೆ ಇದ್ದ ಕಳಕಳಿ ಮತ್ತು ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ರೀತಿ ಇಂದಿಗೂ ಮಾದರಿಯಾಗಿದೆ. ಆದರ್ಶ ಶಿಕ್ಷಕರೆನಿಸಿಕೊಂಡತೆಯೇ ಸಮಾಜ ಸುಧಾರಕರೂ ಎಂದೆನಿಸಿಕೊಂಡರು. ಅವರ ಧರ್ಮಶ್ರದ್ಧೆ ಆದರಣೀಯವಾದದ್ದು. ಅವರು ರಚಿಸಿದ ಹಲವು ಕೃತಿಗಳಲ್ಲಿ ಕವನಗಳು, ಒಗಟುಗಳು, ಹಾಸ್ಯಗಳು ಒಳಗೊಂಡು ಶಿವಭಕ್ತಿ ಸಾರ, ಹರಿಹರನ ರಗಳೆ, ಕಂನ್ನಾಡು, ಲೋಕೋಕ್ತಿ ವಿಧಾನ, ಶಿವಾನಂದ ಲಹರಿ, ವಜ್ರದುಂಗುರ ಇಂತಹ ಮೌಲಿಕ ಕೃತಿಗಳನ್ನು ಹಳಗನ್ನಡ ಹಾಗೂ ಛಂದಸ್ಸಿಗೆ ಅನುಗುಣವಾಗಿ ರಚಿಸಿದರು. ಹಳಗನ್ನಡದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು ಎಂದರು.

ಡಾ. ಎನ್.ಜಿ. ಮಹಾದೇವಪ್ಪ ಅವರ ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಚನ್ನಮ್ಮನ ಕಿತ್ತೂರು ಎಸ್.ಜಿ. ಹೈಸ್ಕೂಲ್‌ ವಿದ್ಯಾರ್ಥಿ ಶ್ರವಣಚಂದಪ್ಪ ಮೇಟ್ಯಾಲ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ಶ್ರೀಮತಿ ಅಕ್ಕಮಹಾದೇವಿ ಸದಾನಂದ ನಾಗಶೆಟ್ಟಿ, ಎಸ್.ಎಸ್. ನಾಗಶೆಟ್ಟಿ ಉಪಸ್ಥಿತರಿದ್ದರು.

ಶಂಕರ ಕುಂಬಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ಪರಿಚಯಿಸಿದರು. ಗುರು ಹಿರೇಮಠ ವಂದಿಸಿದರು. ಪ್ರೊ. ಧನವಂತ ಹಾಜವಗೋಳ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಎಸ್.ಎನ್. ಬಣಕಾರ, ಬಿ.ಎಸ್. ಸಂಗಟಿ, ಜಿ.ಬಿ. ಹಳ್ಯಾಳ, ಸಿ.ಎಸ್. ಪಾಟೀಲ, ಸುರೇಶ ಹಿರೇಮಠ, ಮಹಾಂತೇಶ ನರೇಗಲ್, ಮೋಹನ ಪಾಟೀಲ, ರಾಜಶೇಖರ ನಾಗಶೆಟ್ಟಿ, ರತ್ನಾ ಎಲಿಗಾರ, ಪ್ರಭಾವತಿ ನಾಗಶೆಟ್ಟಿ, ಶಿವಾನಂದ ಕೊಟ್ರಶೆಟ್ಟಿ, ಶಂಕರ ಕೋಳಿ, ಎಸ್.ವಿ. ದಳವಾಯಿ, ಜ್ಯೋತಿ ಭಾವಿಕಟ್ಟಿ ಮುಂತಾದವರಿದ್ದರು.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು