ಹುಬ್ಬಳ್ಳಿ: ವೀರಶೈವ- ಲಿಂಗಾಯತರು ಒಂದೇ. ಅವೆರಡೂ ಬೇರೆ ಬೇರೆ ಅಲ್ಲ. ಲಿಂಗಪೂಜೆ ಮಾಡುವವರು, ಅಷ್ಟಾವರಣ, ಪಂಚಾಚಾರ್ಯ ಷಟಷ್ಥಲ ಯಾರು ಅನುಸರಿಸುತ್ತಾರೋ ಅವರೆಲ್ಲರೂ ವೀರಶೈವರು. ಗುರು- ವಿರಕ್ತರೆಂಬ ಭೇದವಿಲ್ಲದೆ ಎಲ್ಲರೂ ಒಂದಾಗಿದ್ದು ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೆ. 19ರಂದು ಮಧ್ಯಾಹ್ನ 3ಕ್ಕೆ ವೀರಶೈವ-ಲಿಂಗಾಯತರ ಏಕತಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಇದು ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ ಮತ್ತು ಐಕ್ಯತೆ ಸಮಾವೇಶವಾಗಿದೆ. ಸುಮಾರು ವರ್ಷಗಳ ಹಿಂದೆ ಶಿವಕುಮಾರ ಮಹಾಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಹಿಂದಿನ ಎಲ್ಲ ಅಧ್ಯಕ್ಷರು ಲಿಂಗಾಯತ, ವೀರಶೈವ ಸಮಾನಾರ್ಥಕವಾದ ಪದಗಳು ಮತ್ತು ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ಸಮಾಜದಲ್ಲಿ ಉಂಟಾಗಿರುವ ಅಭಿಪ್ರಾಯ, ಬೇಧ ಸರಿಯಲ್ಲ. ಸೆ. 22ರಿಂದ ಆರಂಭವಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ವೀರಶೈವ- ಲಿಂಗಾಯತ ಮತ್ತು ಉಪಜಾತಿ ಕಾಲಂನಲ್ಲಿ 135 ಒಳಪಂಗಡಗಳಲ್ಲಿ ಅವರಿಗೆ ಸೂಕ್ತವಾದ ಹೆಸರು ನೋಂದಾಯಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಫಕೀರ ದಿಂಗಾಲೇಶ್ವರ ಸ್ಮಾಮೀಜಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಜರುಗಲಿದೆ. ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಆಗಿವೆ. ಸಾವಿರಾರು ಜನ ಭಕ್ತಾದಿಗಳು ಮತ್ತು ಲಕ್ಷಾಂತರ ಜನ ಇಲ್ಲಿ ಸೇರಲಿದ್ದಾರೆ. ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಸಮಾಜ ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂದು ಕೆಲವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ಅವರೇ ಪ್ರತ್ಯೇಕ ಧರ್ಮ ಮಾಡಲು ಮುಂದಾಗಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.