ಉಜ್ಜಯಿನಿಯ ಭಗವತ್ಪಾದರು । ಇಷ್ಟಲಿಂಗ ಪೂಎ । ಧಾರ್ಮಿಕ ಸಮಾರಂಭ
ಕನ್ನಡಪ್ರಭ ವಾರ್ತೆ ಅರಸೀಕೆರೆವೀರಶೈವ ಪರಂಪರೆ ಅತೀ ವಿಶೇಷವಾದ ಪರಂಪರೆಯನ್ನು ಹೊಂದಿದೆ. ನಾವು ವೀರಶೈವರಾಗಿ ಹುಟ್ಟಿ ಬಂದಿರುವುದು ನೂರಾರು ಜನ್ಮದ ಪುಣ್ಯದ ಫಲ ಎಂದು ಉಜ್ಜಯಿನಿ ಸಧ್ಧರ್ಮ ಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಪ್ರಸನ್ನ ದಾರುಕ ಶ್ರೀ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಕೆಲ್ಲಂಗೆರೆ ಗ್ರಾಮದಲ್ಲಿ ಜರುಗಿದ ಇಷ್ಠಲಿಂಗ ಪೂಜೆ ನೆರವೇರಿಸಿ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಇಂದು ಸಮಾಜದಲ್ಲಿ ಧಾರ್ಮಿಕ ಸಮಾರಂಭಗಳು ನಡೆಯುತ್ತಿರುವುದರಿಂದ ಕಾಲಕಾಲಕ್ಕೆ ಮಳೆ ಬೆಳೆಗಳು ಆಗುತ್ತ ಜನರು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.‘ವೀರಶೈವರಾಗಿ ಹುಟ್ಟಿದ ಮಾತ್ರಕ್ಕೆ ನಾವು ವೀರಶೈವ ಲಿಂಗಾಯತರು ಎಂದು ಹೇಳಿಕೊಳ್ಳುವ ಬದಲು ಈ ಪರಂಪರೆಯಲ್ಲಿ ಇರುವ ಹಾಗೆ ಲಿಂಗ ಧಾರಣೆ, ಲಿಂಗ ಪೂಜೆ, ಸಂಸ್ಕಾರಗಳನ್ನು ನಮ್ಮ ಕುಟುಂಬದಲ್ಲಿ ಪ್ರತಿನಿತ್ಯ ಅಳವಡಿಸಿಕೊಂಡು ವೀರಶೈವ ಪರಂಪರೆಯನ್ನು ಬೆಳೆಸಿದರೆ ಮಾತ್ರ ನಾವು ವೀರಶೈವ ಲಿಂಗಾಯತರು ಎಂದು ಹೇಳಿಕೊಳ್ಳಲು ಸಾಧ್ಯ. ನೂರಾರು ಧರ್ಮ, ಜಾತಿಗಳನ್ನು ನಾವು ನೋಡಿದ್ದೇವೆ. ಎಲ್ಲಾ ಧರ್ಮಗಳಲ್ಲಿ ವ್ಯಕ್ತಿ ಹುಟ್ಟಿದ ತರುವಾಯ ಸಂಸ್ಕಾರಗಳು ಪ್ರಾರಂಭವಾದರೆ ನಮ್ಮ ವೀರಶೈವ ಲಿಂಗಾಯತ ಧರ್ಮದಲ್ಲಿ ಮಾತ್ರ ವ್ಯಕ್ತಿ ಹುಟ್ಟುವ ಮುಂಚೆ ಅಂದರೆ ತಾಯಿಯ ಗರ್ಭದಲ್ಲಿರುವ ೮ನೇ ತಿಂಗಳಿನಲ್ಲಿಯೇ ಗರ್ಭಕ್ಕೆ ಲಿಂಗಧಾರಣೆ ಮಾಡಿ ಪಂಚಾಕ್ಷರ ಮಹಾಮಂತ್ರದ ಉಪದೇಶ ಮಾಡಿ ಅಂಗವನ್ನು ಲಿಂಗವನ್ನಾಗಿ ಮಾಡಿ ಹುಟ್ಟುವ ಮಗು ಅಂಗರೂಪದ ಜೊತೆ ಲಿಂಗರೂಪಿಯಾಗಿ ಈ ಜಗತ್ತಿಗೆ ಪ್ರವೇಶ ಮಾಡಬೇಕು ಎನ್ನುವ ಸಂಸ್ಕಾರ ಇರುವುದು ನಮ್ಮ ವೀರಶೈವ ಪರಂಪರೆಯಲ್ಲಿ ಮಾತ್ರ’ ಎಂದು ಹೇಳಿದರು.
‘ನಾವು ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಸಂಸ್ಕಾರದ ಕೊರತೆಯಿಂದ ಆಗುತ್ತಿರುವ ತಪ್ಪು. ಸರಿಯಾದ ಸಮಯದಲ್ಲಿ ಯೋಗ್ಯ ಗುರುಗಳಿಂದ ಸಂಸ್ಕಾರ ನೀಡಿದ್ದೇ ಆದಲ್ಲಿ ಯಾವ ಮಕ್ಕಳೂ ತಪ್ಪು ಮಾಡಲು ಸಾಧ್ಯವಿಲ್ಲ. ಇಂದು ಹೊರ ದೇಶಗಳಲ್ಲಿ ಲಿಂಗ ಪೂಜೆ ಮಾಡುವುದನ್ನು ಕಲಿತು ನಮ್ಮ ಪರಂಪರೆಯನ್ನು ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ದೇವರು ಕರುಣಿಸಿರುವ ಈ ದೇಹದ ಎದೆಯ ಭಾಗದ ಮೇಲೆ ಲಿಂಗವನ್ನು ಧರಿಸಿ ಪ್ರತೀ ದಿನ ಲಿಂಗಪೂಜೆ ಮಾಡುವುದರ ಮೂಲಕ ಪ್ರತೀ ವೀರಶೈವರು ನಡೆದಾಡುವ ದೇವರಾಬಹುದು’ ಎಂದು ತಿಳಿಸಿದರು.ವೀರಶೈವ ಸಮಾಜದ ಮುಖಂಡ ಎಲ್.ಕೆ.ವಿ.ನಿರ್ವಾಣಸ್ವಾಮಿ ಮಾತನಾಡಿ, ‘ಈ ಸಮಾಜದಲ್ಲಿ ಹುಟ್ಟಿದ ನಾವು ನಮ್ಮ ಪಂಚಪೀಠದ ಜಗದ್ಗುರುಗಳನ್ನು ಕರೆಸಿ ಇಷ್ಠಲಿಂಗ ಪೂಜೆ ಹಾಗೂ ದಾರ್ಮಿಕ ಕಾರ್ಯ ನಡೆಸುವುದು ನಮ್ಮ ಸೌಭಾಗ್ಯ. ಅದೇ ರೀತಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಕೇದಾರನಾಥ ಕ್ಷೇತ್ರದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಅರಸೀಕೆರೆ ನಗರದಲ್ಲಿ ಮಹಾ ಇಷ್ಠಲಿಂಗ ಪೂಜೆ ನಡೆಸಲು ತಮ್ಮೆಲ್ಲರ ಸಹಕಾರ ಬೇಕಿದೆ’ ಎಂದು ಮನವಿ ಮಾಡಿದರು.
ಹೊನ್ನವಳ್ಳಿ ಗ್ರಾಮದ ಗುರು ಕರಿಸಿದ್ದೇಶ್ವರ ಸ್ವಾಮಿ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿ, ಡಿ.ಎಂ.ಕುರ್ಕೆ ವಿರಕ್ತಮಠದ ಶಶಿಶೇಖರ ಸಿದ್ಧಬಸವ ಸ್ವಾಮಿ, ಕೆ.ವಿ.ಎನ್ ಶಿವಕುಮಾರ್ ಮತ್ತು ಸಹೋದರರು, ವಂಶಸ್ಥರು, ರೈಲ್ವೆ ನಿವೃತ್ತ ನೌಕರ ಮಹದೇವ್, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.