ಕನ್ನಡಪ್ರಭ ವಾರ್ತೆ ಬೆಳಗಾವಿ
ವೀರಶೈವ ಲಿಂಗಾಯತ ಸಮಾಜದ ಶಕ್ತಿ ಬಹುದೊಡ್ಡದು. ಅನೇಕ ಮಠಮಾನ್ಯಗಳು ಶಿಕ್ಷಣವನ್ನು ಧಾರೆ ಎರೆದು ಒಂದೆಡೆಗೆ ಮುನ್ನಡೆಸಿದ್ದರೆ ಇನ್ನೊಂದೆಡೆ ಕೆಎಲ್‌ಇ ಸಂಸ್ಥೆ, ಬಿಎಲ್‌ಡಿಇಯಂತಹ ಅನೇಕ ಸಂಸ್ಥೆಗಳು ಅಗಾಧ ಕೊಡುಗೆ ನೀಡಿವೆ. ಆದರೆ ನಾವು ಸಾಮಾಜಿಕವಾಗಿ ದುರ್ಬಲರಾಗುತ್ತಿರುವುದು ಖೇದಕರ. ಇಂದು ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಸಮಾಜದ ಬಡ ಹೆಣ್ಣುಮಕ್ಕಳಿಗೆ ಉಚಿತ ವಸತಿ ನಿಲಯ ನಿರ್ಮಿಸಿರುವುದು ಸಂತೋಷ ತಂದಿದೆ. ಅವರ ಶ್ರಮ ಅಗಾಧವಾದುದು. ಪ್ರತಿಯೊಂದು ಜಿಲ್ಲೆಯಲ್ಲಿ ಮಹಾಸಭೆಯು ಹೆಣ್ಣುಮಕ್ಕಳಿಗೆ ಉಚಿತ ವಸತಿ ನಿಲಯ ನಿರ್ಮಿಸಿರುವ ಸಂಕಲ್ಪ ಮಾಡಿದೆ. ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದರು.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸಂಕಲ್ಪತೊಟ್ಟು ಅನೇಕ ಯೋಜನೆಗಳನ್ನು ಜಾರಿಗೆ ತಂದ ಹೆಮ್ಮೆ ನನಗಿದೆ. ಕೆಎಲ್‌ಇ, ಬಿವಿಬಿ, ಬಿಎಲ್‌ಡಿ ಅಂಥ ಅನೇಕ ಸಂಸ್ಥೆಗಳು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಆದರೆ ಸಮಾಜವನ್ನು ಇಬ್ಭಾಗ ಮಾಡುತ್ತಿರುವುದು ನಮ್ಮ ಇಂದಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಒಳಪಂಗಡಗಳನ್ನು ಬಿಟ್ಟು ನಾವು ಒಂದಾದಾಗ ರಾಜಕೀಯವಾಗಿ ಸಾಮರ್ಥ್ಯವನ್ನು ಪಡೆಯಲು ಸಾಧ್ಯ ಎಂದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ನಡುವೆ ಒಡಕನ್ನುಂಟುಮಾಡಿ ಸಮಾಜ ಒಡೆಯುತ್ತಿದ್ದಾರೆ. ಇದರಿಂದ ನಾವು ಮತ್ತಷ್ಟು ಹಿನ್ನಡೆ ಪಡೆಯುವಂತಾಗಿದೆ. ವೀರಶೈವ ಲಿಂಗಾಯತ ಒಂದು ಶಕ್ತಿಯಾಗಿ ರೂಪಗೊಳ್ಳುವುದು ಇಂದಿನ ಕಾಲದ ಅಗತ್ಯ ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಡಾ.ಕೋರೆಯವರು ಈ ವಸತಿನಿಲಯ ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಅವರು ಶಿಕ್ಷಣಕ್ಷೇತ್ರಕ್ಕೆ ನೀಡಿದ ಸೇವೆಯು ದೊಡ್ಡದು. ಅವರ ಸೇವೆಗೆ ನಮ್ಮ ಸಹಾಯ ಸಹಕಾರಗಳು ಯಾವತ್ತೂ ಇದೆ ಎಂದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ನಮ್ಮ ಸಮಾಜದ ಹೆಣ್ಣುಮಕ್ಕಳು ಮುಂದೆ ಬರಬೇಕೆಂಬ ಡಾ.ಕೋರೆಯವರ ಸಂಕಲ್ಪ ಬಹುದೊಡ್ಡದು. ಇಂದು ನಮ್ಮ ಮಕ್ಕಳಿಗೆ ವಚನಸಂಸ್ಕೃತಿ, ಲಿಂಗಪೂಜೆಯನ್ನು ಕಲಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು.ಮಹಾಸಭೆ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಪದವಿ, ಉನ್ನತ ಶಿಕ್ಷಣವನ್ನು ಪಡೆಯಲು ಬೆಳಗಾವಿಗೆ ಆಗಮಿಸುವ ಅತಿಬಡ ಹೆಣ್ಣು ಮಕ್ಕಳಿಗಾಗಿ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸಬೇಕೆಂಬುದು ನನ್ನ ಸದೃಢವಾದ ಇಚ್ಛಾಶಕ್ತಿಯಾಗಿತ್ತು. ಈ ಕುರಿತು ಬಿ.ಎಸ್.ಯಡಿಯೂರಪ್ಪನವರು 24 ಗುಂಟೆ ನಿವೇಶನವನ್ನು ಕಡಿಮೆ ಬೆಲೆಯಲ್ಲಿ ದೊರಕಿಸಿಕೊಟ್ಟರು. ಇಂದು ವಸತಿ ನಿಲಯವು ₹3 ಕೋಟಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದರು.
ಈ ಗೃಹದಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದೇವೆ. ಈ ಮಹತ್ ಕಾರ್ಯವನ್ನು ಒಬ್ಬರೇ ನೆರವೇರಿಸುವಷ್ಟು ವೀರಶೈವ ಲಿಂಗಾಯತ ಸಮಾಜದಲ್ಲಿ ಶ್ರೀಮಂತರುಂಟು. ಆದರೆ ಇದು ಸಮಾಜದ ಕೆಲಸ ಎಲ್ಲರೂ ಜೊತೆಯಾಗಬೇಕೆಂಬುದು ನನ್ನ ಸಂಕಲ್ಪವಾಗಿತ್ತು. ಅನೇಕ ದಾನಿಗಳು ಮುಂದೆ ಬಂದು ವಸತಿ ನಿಲಯ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅದರಲ್ಲಿಯೂ ಖ್ಯಾತ ಉದ್ಯಮಿಗಳಾದ ಮಹೇಶ ಬೆಲ್ಲದ ಅವರು ₹1 ಕೋಟಿ ದಾನ ನೀಡಿ ಉದಾರ ದಾನಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು. ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ, ಉದ್ಯಮಿ ಹಾಗೂ ದಾನಿ ಮಹೇಶ ಬಿ. ಬೆಲ್ಲದ, ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ಶೈಲೇಂದ್ರ ಬೆಲ್ದಾಳೆ, ಎಂ.ವೈ.ಪಾಟೀಲ, ಗಣೇಶ ಹುಕ್ಕೇರಿ, ಬಿ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯ ಶುಶಿಲ್ ನಮೋಶಿ, ಹನುಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಎಚ್.ಬಿ.ರಾಜಶೇಖರ, ಆಶಾ ಪ್ರಭಾಕರ ಕೋರೆ, ಎಂ.ಬಿ.ಜೀರಳಿ, ಜಗದೀಶ ಮೆಟಗುಡ್ಡ, ಡಾ.ಪ್ರೀತಿ ಪ್ರಭಾಕರ ಕೋರೆ ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳಾದ ಡಾ.ಮಹೇಶ ಬೆಲ್ಲದ ಹಾಗೂ ಅನಿತಾ ಬೆಲ್ಲದ ದಂಪತಿಗಳಿಗೆ ಗಣ್ಯರು ಸತ್ಕರಿಸಿದರು.