ವೀರಶೈವ ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸುವುದು ಅವಶ್ಯ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಶ್ರೀಶೈಲ ಪೀಠದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುತ್ತೂರು, ಸಿರಿಗೆರೆ, ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳು ಸೇರಿ ಅನೇಕ ಸ್ವಾಮೀಜಿಗಳು ಪಾಲ್ಗೊಳ್ಳುವರು.

ಕೊಟ್ಟೂರು: ನಮಲ್ಲಿರುವ ಅನೇಕ ಉಪ ಪಂಗಡಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ದಾವಣಗೆರೆಯಲ್ಲಿ ಡಿ. ೨೩ ಮತ್ತು ೨೪ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನ ಮೂಲಕ ನಮ್ಮ ಶಕ್ತಿ ಪ್ರದರ್ಶಿಸುವುದು ಅತ್ಯವಶ್ಯವಿದೆ ಎಂದು ಮಹಾಸಭಾದ ವಿಜಯನಗರ ಜಿಲ್ಲಾ ಉಸ್ತುವಾರಿ ಪ್ರಕಾಶ ಪಾಟೀಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನದ ಕುರಿತು ನಡೆದ ಸಮುದಾಯದವರ ಸಭೆಯಲ್ಲಿ ಮಾತನಾಡಿದರು.

ದಾವಣಗೇರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿಎರಡು ದಿನಗಲ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಯೊಬ್ಬರೂ ಭಾಗವಹಿಸಬೇಕು. ನಮ್ಮಲ್ಲಿನ ಉಪ ಪಂಗಡದವರು ಉದ್ಯೋಗ, ಶಿಕ್ಷಣಕ್ಕಾಗಿ ಜಾತಿ ಕಾಲಂನಲ್ಲಿ ನಮೂದಿಸಿರುವುದನ್ನೇ ಗಣನೆಗೆ ತೆಗೆದುಕೊಂಡಿರುವ ಸರ್ಕಾರದ ಕ್ರಮದಿಂದಾಗಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆಯೇ ಅತೀ ಕಡಿಮೆಯಾಗಿದೆ. ಇದರಿಂದಾಗಿ ಸರ್ಕಾರದ ಮೀಸಲಾತಿ ಕೆಲವರಿಗೆ ಮಾತ್ರ ಸಿಕ್ಕಿದೆ. ವೀರಶೈವ ಲಿಂಗಾಯತದ ಪ್ರತಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಶ್ರೀಶೈಲ ಪೀಠದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುತ್ತೂರು, ಸಿರಿಗೆರೆ, ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳು ಸೇರಿ ಅನೇಕ ಸ್ವಾಮೀಜಿಗಳು ಪಾಲ್ಗೊಳ್ಳುವರು ಎಂದರು.

ಮಹಾಸಭಾದ ಜಿಲ್ಲಾಧ್ಯಕ್ಷ, ಹರಪನಹಳ್ಳಿಯ ಪುರಸಭಾ ಮಾಜಿ ಅಧ್ಯಕ್ಷ ಎಂ. ರಾಜಶೇಖರ ಮಾತನಾಡಿ, ರಾಜ್ಯದಲ್ಲಿ ಸಮರ್ಪಕ ಮಾನದಂಡ ಬಳಸದೇ, ಅವೈಜ್ಞಾನಿಕವಾಗಿ ಸಿದ್ಧಗೊಂಡಿರುವ ಕಾಂತರಾಜರ ಜಾತಿ ಗಣತಿಯನ್ನು ಬಿಡುಗಡೆ ಮಾಡದಂತೆ ಮಹಾಸಭಾದಿಂದ ಸರ್ಕಾರಕ್ಕೆ ವಿನಂತಿಸಲಾಗಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕಕವಾಗಿ ಜಾತಿಗಣತಿ ವರದಿ ಸಿದ್ಧಪಡಿಸಲಿ ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ರಾಜ್ಯ ಬೀಜ ನಿಗಮ ಸದಸ್ಯ ಎಸ್. ರಾಜೇಂದ್ರ ಪ್ರಸಾದ ಮಾತನಾಡಿ, ದಾವಣಗೆರೆ ಸಮಾವೇಶಕ್ಕೆ ಕೊಟ್ಟೂರು ತಾಲೂಕಿನಿಂದ ಹೆಚ್ಚಿನ ಜನರನ್ನು ಕರೆತರುವುದಾಗಿ ಹೇಳಿದರು.

ಸಮುದಾಯದ ಮುಖಂಡರಾದ ಎಸ್. ಶಿವಣ್ಣ, ಪಿ. ಸುಧಾಕರಗೌಡ ಪಾಟೀಲ, ಪಿ. ಭರಮನಗೌಡ ಪಾಟೀಲ, ಐ. ದಾರುಕೇಶ, ಟಿ.ಎಂ. ಸೋಮಯ್ಯ, ವಿವೇಕಾನಂದ, ಚಾಪಿ ಚಂದ್ರಣ್ಣ, ಕಾಮಶೆಟ್ಟಿ ಕೊಟ್ರೇಶ ಸೇರಿ ಅನೇಕರು ಇದ್ದರು.

Share this article