ವೀರೇಶ್ವರ ಪುಣ್ಯಾಶ್ರಮ ಸಂಗೀತ ಕಾಶಿ: ಕಾಶಿ ಶ್ರೀಗಳು

KannadaprabhaNewsNetwork |  
Published : Jun 14, 2025, 12:42 AM IST
ಕಾರ್ಯಕ್ರದಲ್ಲಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿದರು. | Kannada Prabha

ಸಾರಾಂಶ

ಜಗತ್ತಿಗೆ ಜ್ಞಾನ ನೀಡುವ ಕ್ಷೇತ್ರ ಕಾಶಿಯಾದರೆ, ಸಂಗೀತ ನೀಡುವ ಕಾಶಿ ಗದುಗಿನ ವೀರೇಶ್ವರ ಪುಣ್ಯಾಶ್ರಮವಾಗಿದೆ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಗದಗ: ಜಗತ್ತಿಗೆ ಜ್ಞಾನ ನೀಡುವ ಕ್ಷೇತ್ರ ಕಾಶಿಯಾದರೆ, ಸಂಗೀತ ನೀಡುವ ಕಾಶಿ ಗದುಗಿನ ವೀರೇಶ್ವರ ಪುಣ್ಯಾಶ್ರಮವಾಗಿದೆ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಗು ಆರೋಗ್ಯವಾಗಿದ್ದರೆ ಮನೆಯಲ್ಲಿ ಸಾಕುತ್ತಾರೆ. ಮಗು ವಿಶೇಷಚೇತನರಾದರೆ ತ್ಯಾಗ ಮಾಡುತ್ತಾರೆ. ಅಂತಹ ತ್ಯಾಗ ಮಾಡಿದ ಮಕ್ಕಳನ್ನು ಗುರುತಿಸಿ ಅವರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟವರು ದೇವಯೋಗಿ ಶ್ರೀ ಹಾನಗಲ್ ಕುಮಾರಸ್ವಾಮಿಗಳು ಎಂದರು.ಪಂ.ಪುಟ್ಟರಾಜ ಕವಿ ಗವಾಯಿಗಳವರು ಸಾವಿರಾರು ಅಂಧ-ಅನಾಥ ವಿದ್ಯಾರ್ಥಿಗಳ ಜೀವನ ರೂಪಿಸಿದ ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾರೆ. ಆದ್ದರಿಂದ ಪುಣ್ಯಾಶ್ರಮವನ್ನು ಸಂಗೀತ ಕಾಶಿ ಎಂದು ಹೇಳಿದರೆ ಬಹಳ ಒಳ್ಳೆಯದಾಗುತ್ತದೆ. ಆಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಂದ ಬೆಳಗಿನಿಂದ ಬೆಳಗಾಗುವವರೆಗೂ ಸಂಗೀತ ಸಮಾರಾಧನೆಯೊಂದಿಗೆ ಉಭಯ ಶ್ರೀಗಳವರ ಪುಣ್ಯಸ್ಮರಣೆ ನಡೆಯುತ್ತದೆ ಎಂದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಾತ್ರ ಎಂದರು.

ಹುಬ್ಬಳ್ಳಿಯ ಆಯುರ್ವೇದಿಕ್ ಮಹಾಮನೆಯ ವೈದ್ಯ ಚೆನ್ನಬಸವಣ್ಣ ಗುರೂಜಿ ಮಾತನಾಡಿ, ಮಕ್ಕಳು ಜಿಂಕ್ ಪುಡ್ ತಿನ್ನುವ ಮೂಲಕ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಮಕ್ಕಳು ಕಲ್ಲು, ಕಟ್ಟಿಗೆ, ಮಣ್ಣಿನಲ್ಲಿ ಆಟವಾಡುತ್ತಿದ್ದರೆ, ಇಂದಿನ ಮಕ್ಕಳು ಮೊಬೈಲ್, ಟಿವಿಯಲ್ಲಿ ಮುಳುಗಿಹೋಗಿದ್ದಾರೆ. ಮಕ್ಕಳ ಆರೋಗ್ಯ ಬಗ್ಗೆ ಪಾಲಕರು ಹೆಚ್ಚಿನ ಗಮನಹರಿಸಬೇಕು ಎಂದರು.

ಚಳಗೇರಿ ಹಿರೇಮಠದ ಶ್ರೀವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳ ಜಯಂತಿಯನ್ನು ಸರಕಾರದಿಂದಲೇ ಆಚರಿಸುವಂತಾಗಬೇಕು. ಉತ್ತರ ಕರ್ನಾಟಕದಲ್ಲಿ ಉಭಯ ಶ್ರೀಗಳು ಅಭೂತಪೂರ್ವ ಸೇವೆಯನ್ನು ಸಲ್ಲಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಂಡಿದ್ದಾರೆ ಎಂದರು.

ಈ ವೇಳೆ ಸೂಡಿ ಜುಕ್ತಿಹಿರೇಮಠದ ಶ್ರೀಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಎಮ್ಮಿಗನೂರ ಶ್ರೀ ಹಂಪಿ ಸಾವಿರ ದೇವರು, ಮಹಾಮಹಂತರ ಸಂಸ್ಥಾನ ಗುರುಮಠದ ಶ್ರೀ ವಾಮದೇವ ಮಹಾಂತ, ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಹೆಬ್ಬಾಳ ಸಂಸ್ಥಾನ ಬೃಹನ್ಮಠದ ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಸುಳ್ಳ-ಹೂಲಿ ಪಂಚಗೃಹಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಡ್ನೂರ-ರಾಜೂರ ಬ್ರಹನ್ಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಶಿವಶರಣೆ ನಂದೀಶ್ವರಿ ಅಮ್ಮನವರು, ಅಡವಿಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ, ಬಸವನ ಬಾಗೇವಾಡಿಯ ಶಿವಪ್ರಕಾಶ ಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಡಾ. ಕಲ್ಲಯ್ಯಜ್ಜನವರು, ಪಂ. ರಾಜಗುರು ಕಲಕೇರಿ, ನಿಂಗಪ್ಪ ಕೆಂಗಾರ, ಡಾ. ಬಸವರಾಜ ಬೊಮ್ಮನಹಳ್ಳಿ, ವಸಂತಗೌಡ್ರ ಪೊಲೀಸ್‌ಪಾಟೀಲ, ಲಿಂಗರಾಜ ಗುಡಿಮನಿ, ಅನಿಲ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ ಸೇರಿದಂತೆ ಇತರರು ಇದ್ದರು. ಈ ವೇಳೆ ಗೀತ ಮಂದಾರ ಗ್ರಂಥ ಹಾಗೂ ಪುಟ್ಟರಾಜ ಋಣಭಾರ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕೂಗು ಸ್ವಾಗತಿಸಿದರು. ಬಂಡಯ್ಯಶಾಸ್ತ್ರೀ ಸುಂಟನೂರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !
ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ: ಹರಿನಾರಾಯಣ ದಾಸ ಆಸ್ರಣ್ಣ