ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಈಚನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 279 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳ ಶೌಚಾಲಯದ ವ್ಯವಸ್ಥೆ ಸಪರ್ಮಕವಾಗಿಲ್ಲ. ಶಾಲೆಯಲ್ಲಿ ಒಟ್ಟು ಎರಡು ಶೌಚಾಲಯಗಳ ಇವೆ. ಶೌಚಾಲಯ ಗಳನ್ನು ವಿದ್ಯಾರ್ಥಿನಿಯರು ಬಳಕೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಬಯಲಲ್ಲಿಯೇ ಶೌಚಾಲಯಕ್ಕೆ ತೆರಳಬೇಕಿದೆ. 6ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಸಮರ್ಥ ಬಸವರಾಜ ಡೋಳ್ಳಿನ್ ಎಂಬ ವಿದ್ಯಾರ್ಥಿ ಮಧ್ಯಾಹ್ನ ಶಾಲಾ ಅವಧಿಯಲ್ಲಿ ಶೌಚಕ್ಕೆ ಶಾಲೆಯ ದ್ವಾರದ ಬಳಿಯಲ್ಲಿ ತೆರಳುತ್ತಿದ್ದಾಗ. ಹಿಂದು ಗಡೆಯಿಂದ ಬಂದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಗೊಂಡ ವಿದ್ಯಾರ್ಥಿ ಯನ್ನು ಪಾಲಕರೇ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ವಿದ್ಯಾರ್ಥಿ ಬಲಗಾಲಿನ ಮಂಡಿ ಕೆಳಗೆ ಎಲುಬು ಮುರಿದಿದೆ. ವೈದ್ಯರು ರಾಡ್ ಹಾಕಿದ್ದು ವಿದ್ಯಾರ್ಥಿ ನೋವಿನಿಂದ ಬಳಲುತ್ತಿದ್ದಾನೆ.
ಶಿಕ್ಷಕರ ಸುಳಿವಿಲ್ಲ: ಈಚನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಅತಿಥಿ ಶಿಕ್ಷಕರು ಸೇರಿ 11 ಜನ ಶಿಕ್ಷಕರು ಇದ್ದಾರೆ. ಇದರ ಪೈಕಿ 3 ಜನ ಶಿಕ್ಷಕರು ರಜೆಯ ಮೇಲೆ ಹೋಗಿದ್ದು, 3 ಜನ ಶಿಕ್ಷಕರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಉಳಿದಂತೆ 3 ಶಿಕ್ಷಕರು ಮಾತ್ರ ಶಾಲೆಯಲ್ಲಿ ಇದ್ದರು. ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗೆ ಅಪಘಾತ ಉಂಟಾಗಿ ಕಾಲು ಮುರಿದು ಆಸ್ಪತ್ರೆ ಸೇರಿದರು. ಶಿಕ್ಷಕರು ಆಸ್ಪತ್ರೆ ಕಡೆ ಸುಳಿದಿಲ್ಲ. ಇದರಿಂದ ಸಮಾಜ ತಿದ್ದುವ ಶಿಕ್ಷಕರಲ್ಲಿ ಮಾನವೀಯತೆ ಇಲ್ಲದಾಯಿತೆ? ಇನ್ನು ಮುಖ್ಯ ಶಿಕ್ಷಕ ಯಮನಪ್ಪ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ ಎಂದು ಆರೋಪಿಸಿದರು.ಶೌಚಾಲಯ ಕೊರತೆ: ಈಚನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 279 ವಿದ್ಯಾರ್ಥಿಗಳು ಇದ್ದಾರೆ. ಆದರೆ ಶಾಲೆಯಲ್ಲಿ ಎರಡೇ ಶೌಚಾಲಯಗಳು ಇವೆ. ಎರಡೂ ಶೌಚಾಲಯಗಳನ್ನು ವಿದ್ಯಾರ್ಥಿನಿಯರೇ ಬಳಕೆ ಮಾಡುತ್ತಿದ್ದು, ಗಂಡು ಮಕ್ಕಳಿಗೆ ಶಾಲೆಯ ಮುಂಭಾಗದ ಮಹದ್ವಾರದ ಗೋಡೆ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಶೌಚಾಲಯ ಇಲ್ಲದೇ ಇರುವುದು ಅಪಘಾತದಂತಹ ದುರ್ಘಟನೆ ಸಂಭವಿಸಲು ಕಾರಣವಾಗಿದೆ. ಶಿಕ್ಷಣ ಇಲಾಖೆ ಇದರ ಬಗ್ಗೆ ಗಮನಿಸದೇ ಇರುವುದು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಚನಾಳ ಶಾಲೆಯಲ್ಲಿ ಶಿಕ್ಷಕರು ಶುದ್ಧೀಕರಿಸಿದ ನೀರು ಕುಡಿಯುತ್ತೇವೆ. ಮಕ್ಕಳ ಕುಡಿಯುವ ನೀರಿಗೆ ಶಾಲಾ ಆವರಣದಲ್ಲಿ ಕಿರು ನೀರು ತೊಟ್ಟಿ ಅಳವಡಿಸಿದ್ದು, ಅದರ ನೀರು ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಮಕ್ಕಳಿಗೆ ಶುದ್ದಿಕರಿಸಿ ನೀರು ಮರಿಚೀಕೆಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಶುದ್ಧೀಕರಿಸಿದ ನೀರು ಕುಡಿಯುತ್ತೇವೆ ಎಂದು ಶಿಕ್ಷಕ ನಾರಾಯಣಪ್ಪ ತಿಳಿಸಿದರು.
ಶಾಲೆಯಲ್ಲಿ ಮುಖ್ಯಶಿಕ್ಷಕರು ಒಳಗೊಂಡು ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಎಸ್ಡಿಎಂಸಿಯವರು ಎಷ್ಟೇ ಹೇಳಿದರೂ ಈಚನಾಳ ಶಾಲಾ ಶಿಕ್ಷಕರು ಮಾತು ಕೇಳುವುದಿಲ್ಲ. ಮನಸೋ ಇಚ್ಛೆ ಕಾರ್ಯ ಮಾಡುತ್ತಿದ್ದಾರೆ. ಶಿಕ್ಷಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗೆ ಅಪಘಾತವಾಗಿ ಕಾಲು ಮುರಿದಿದೆ. ಸರ್ಕಾರಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ಮೇಲೆ ಕ್ರಮ ಜರುಗಿಸಿ, ವಿದ್ಯಾರ್ಥಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಕುಂಬಾರ ಹೇಳಿದರು.
ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು. ಘಟನೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರಿಗೆ ನೋಟಿಸ್ ನೀಡಿ ಕ್ರಮ ವಹಿಸಲಾಗುವುದು. ಶಾಲೆಯಲ್ಲಿ ಶೌಚಾಲಯಗಳು ಇವೆ. ಗಂಡು ಮತ್ತು ಹೆಣ್ಣು ಮಕ್ಕಳು ಪಾಳಿ ಪ್ರಜಾರ ಶೌಚಾಲಯ ಮಕ್ಕಳಿಗೆ ಬಳಕೆ ಮಾಡಲು ಸೂಚನೆ ನೀಡಲಾಗಿತ್ತು. ಕೂಡಲೇ ಆಸ್ಪತ್ರೆ ಭೇಟಿ ನೀಡಿ ವಿದ್ಯಾರ್ಥಿ ಯೋಗಕ್ಷೇಮ ವಿಚಾರಿಸಲಾಗುವುದು ಎಂದು ಲಿಂಗಸುಗೂರು ಬಿಇಒ ಸುಜಾತ ಹೂನುರು ಹೇಳಿದರು.