ಹಾವೇರಿ: ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯಿಂದ 6.65 ಲಕ್ಷ ರು. ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ತಾರಾಪ್ಲಾಜಾ ಬಳಿ ಇತ್ತೀಚಿಗೆ ಜೀಪ್ ಕಳ್ಳತನವಾಗಿದ್ದರ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಕಾರ್ಯಾಚರಣೆಯಲ್ಲಿ ಬ್ಯಾಡಗಿ ತಾಲೂಕು ಕಾಗಿನೆಲೆಯ ಚಾಂದಭಾಷಾ ಅಬ್ದುಲ್‌ಸತ್ತಾರ ಶಿಕಾರಿಪುರ (34) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಆರೋಪಿಯಿಂದ ಹಾವೇರಿ, ಶಿಗ್ಗಾಂವಿ, ದಾವಣಗೆರೆಯಲ್ಲಿ ಕಳ್ಳತನ ಮಾಡಿದ್ದ 4.25 ಲಕ್ಷ ಮೊತ್ತದ ಒಂದು ಬೊಲೆರೋ ವಾಹನ, 1.80 ಲಕ್ಷ ಮೊತ್ತದ ಒಂದು ಪ್ಯಾಸೆಂಜರ್ ವಾಹನ, 60 ಸಾವಿರ ರು. ಕಿಮ್ಮತ್ತಿನ ನಾಲ್ಕು ಬೈಕ್‌ಗಳು ಸೇರಿದಂತೆ ಒಟ್ಟು 6.65 ಲಕ್ಷ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿಗಳಾದ ಗಿರಿಮಲ್ಲ ತಳಕಟ್ಟಿ ನೇತೃತ್ವದಲ್ಲಿ ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ ಮುಂದಾಳತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ತಂಡದಲ್ಲಿ ಪಿಎಸ್‌ಐಗಳಾದ ಎನ್.ಎನ್. ಶಿಶುವಿನಹಾಳ, ಎಂ.ಜಿ. ವಗ್ಗಣ್ಣನವರ, ಬಿ.ಜಿ. ದೊಡ್ಡಮನಿ, ಸಿಬ್ಬಂದಿ ಯಲ್ಲಪ್ಪ ತಹಸೀಲ್ದಾರ್, ಮುತ್ತಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜ, ಮಲ್ಲೇಶ ಮಾಯಗೊಂಡರ, ಚಂದ್ರಕಾಂತ ಎಲ್.ಆರ್., ಮೆಹಬೂಬಲಿ ಎನ್.ಎಚ್., ರವಿ ಲಮಾಣಿ, ಬಸವರಾಜ ಸಿಳ್ಳಿಕ್ಯಾತರ, ಮಾಲತೇಶ ಕಬ್ಬೂರ, ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ ಸೇರಿದಂತೆ ಇತರರು ಭಾಗಿಯಾಗಿದ್ದರು.