ದೊಡ್ಡಬಳ್ಳಾಪುರ: ಮುದ್ರಿತ ಸಾಹಿತ್ಯ ಓದುವವರ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ. ಈ ಕಾಲಘಟ್ಟದಲ್ಲಿ ಆನ್‌ಲೈನ್ ಸಾಹಿತ್ಯದ ಅನಿವಾರ್ಯತೆ ಹೆಚ್ಚಿದೆ. ಆದರೆ, ಯುವ ಸಮೂಹ ಅಕ್ಷರ ಸಾಹಿತ್ಯದಿಂದ ದೂರವೇ ಉಳಿದಿರುವುದು ಕಳವಳಕಾರಿ ಸಂಗತಿ ಎಂದು ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್.ಎಸ್.ಮೋಹನ್ ಅಭಿಪ್ರಾಯಪಟ್ಟರು.
ಪ್ರಸ್ತುತ ಎಲ್ಲ ವಯಸ್ಸಿನವರೂ ಮೊಬೈಲ್ ಮತ್ತು ಇಂಟರ್ನೆಟ್ ಬಳಸುತ್ತಿರುವುದರಿಂದ ವೈದ್ಯರು ತಮ್ಮ ಮಾಹಿತಿ ಸಂಕ್ಷಿಪ್ತವಾಗಿ, ಆಕರ್ಷಕವಾಗಿ ಮತ್ತು ಸರಳವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸುವ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಗ್ಯ ಮತ್ತು ಅನಾರೋಗ್ಯದ ಮಾಹಿತಿ ಅಸಲಿತನ ಪರಿಶೀಲಿಸಿ ಜನರಿಗೆ ಸತ್ಯಾಂಶ ತಲುಪಿಸುವ ಪ್ರಮುಖ ಹೊಣೆಗಾರಿಕೆ ವೈದ್ಯರು, ವೈದ್ಯ ಸಾಹಿತಿ ಹಾಗೂ ಬರಹಗಾರರ ಸಂಘದ ಮೇಲಿದೆ ಎಂದು ತಿಳಿಸಿದರು.
ಖಾಸಗಿ ಸ್ವಾಮ್ಯದ ಟೆಲಿವಿಷನ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ವೈದ್ಯಕೀಯ ಸಂದರ್ಶನ ಹಾಗೂ ಸಂವಾದ ಹೆಚ್ಚಾಗಿ ವಾಣಿಜ್ಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿಗೆ ಬನ್ನಿ, ನಿಮ್ಮನ್ನು ಗುಣಪಡಿಸುತ್ತೇವೆ ಎಂಬ ಆಮಿಷದೊಂದಿಗೆ ದೂರವಾಣಿ ಸಂಖ್ಯೆ ನೀಡುವುದು ಕಾನೂನಿಗೆ ವಿರುದ್ಧ. ಈ ಕುರಿತು ಐಎಂಎ ಮತ್ತು ಇತರ ವೈದ್ಯಕೀಯ ಸಂಘಟನೆಗಳು ಸ್ಪಷ್ಟವಾಗಿ ಧ್ವನಿ ಎತ್ತಬೇಕಾಗಿದೆ ಎಂದು ಆಗ್ರಹಿಸಿದರು.ವೈದ್ಯಕೀಯ ರಂಗದಲ್ಲಿ ನಡೆಯುವ ಸಂಶೋಧನಾ ವರದಿ, ಇತ್ತೀಚಿನ ಚಿಕಿತ್ಸಾ ವಿಧಾನ ಮತ್ತು ಅವುಗಳ ಸುರಕ್ಷತೆ ಹಾಗೂ ಉಪಯುಕ್ತ ಕುರಿತು ಸೂಕ್ಷ್ಮ ವಿಶ್ಲೇಷಣೆ ನಡೆಯಬೇಕಿದೆ. ಪರ್ಯಾಯ ವೈದ್ಯ ಪದ್ಧತಿ ಅನುಸರಿಸುವ ಕೆಲವು ವೈದ್ಯರು ಅಲೋಪತಿ ಔಷಧ ಬಗ್ಗೆ ಮಾಧ್ಯಮ-ಗಳಲ್ಲಿ ಉತ್ತೇಜಿತ ಅಡ್ಡ ಪರಿಣಾಮ ಪ್ರಚಾರ ಮಾಡುತ್ತಾರೆ ಮತ್ತು ಜನರಿಗೆ ಅಲೋಪತಿ ಔಷಧ ಥಟ್ಟನೆ ನಿಲ್ಲಿಸುವಂತೆ ಸಲಹೆ ನೀಡುತ್ತಾರೆ. ಇದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ವೈದ್ಯರ ಸಂಘಟನೆಗಳು ಸೂಕ್ತ ರೀತಿಯಲ್ಲಿ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಬರಹಗಾರ ಡಾ.ಡಿ.ವಿ.ರಾವ್ ಮತ್ತು ವೈದ್ಯಕೀಯ ಪದಕೋಶ ರಚಿಸಿದ ಡಾ.ಡಿ.ಎಸ್.ಶಿವಪ್ಪ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. ಆರಂಭದಲ್ಲಿ ಕೆಲವೇ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದ ಪರಿಸ್ಥಿತಿ ಇತ್ತು. ಈಗ ಬಹಳಷ್ಟು ಬದಲಾಗಿದೆ. ಪ್ರಸ್ತುತ ವೈದ್ಯ ಬರಹಗಾರರ ಬಳಗದಲ್ಲಿ 250ಕ್ಕೂ ಹೆಚ್ಚು ವೈದ್ಯ ಸದಸ್ಯರಿದ್ದು, ಬಳಗದ ಹೊರಗೂ ಅನೇಕ ವೈದ್ಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆಯಾಗಿದೆ ಎಂದರು.
ವೈದ್ಯ ಸಾಹಿತಿ ಪುರಸ್ಕಾರ ಪ್ರದಾನ:
ಹಿರಿಯ ವೈದ್ಯ ಸಾಹಿತಿ ಹಾಗೂ ಐಎಂಎ ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ಬಿ.ಎ.ವೀರಭದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನದಲ್ಲಿ ಐಎಂಎಯ ನಿಯೋಜಿತ ಅಧ್ಯಕ್ಷ ಡಾ.ಹರೀಶ ದೇಲಂತಬೆಟ್ಟು, ಡಾ.ಅಣ್ಣಯ್ಯ ಕಾರ್ಯದರ್ಶಿ ಉಪಾಧ್ಯಕ್ಷ ಕುಲಾಲ್, ಗೌರವ ಡಾ.ಸೂರಿರಾಜು, ಖಜಾಂಜಿ ಡಾ.ಶಂಕರ್ ನಾರಾಯಣ್, ನಿಕಟಪೂರ್ವ ಅಧ್ಯಕ್ಷ ಚಿನಿವಾಲರ್, ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಡಾ.ರಮೇಶ್ ಮತ್ತು ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷೆ ಡಾ.ಆರ್.ಇಂದಿರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದಲ್ಲಿ ನಡೆದ 7ನೇ ರಾಜ್ಯ ವೈದ್ಯ ಬರಹಗಾರರ ಸಮ್ಮೇಳನದಲ್ಲಿ ಹಿರಿಯ ವೈದ್ಯರಾದ ಡಾ.ಶ್ಯಮಂತಕ ಮಣಿ ನರೇಂದ್ರನ್ ಅವರಿಗೆ 2025-26ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.