ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಅರೇಹಳ್ಳಿಯಲ್ಲಿ ಕಾರ್ಮಿಕ ನಿರೀಕ್ಷಕರಿಂದ ಸ್ಥಳ ಪರಿಶೀಲನೆ ನಡೆಸಿದಾಗ ಅನರ್ಹರು ತಮ್ಮ ಲೇಬರ್ ಕಾರ್ಡ್ ಮರಳಿಸಿದ ಘಟನೆ ನಡೆದಿದೆ.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ಶೈಕ್ಷಣಿಕ ಧನಸಹಾಯ ಪಡೆದುಕೊಳ್ಳಲು ಈ ಹಿಂದೆ ಸಲ್ಲಿಸಿದ್ದ ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಕಾರ್ಮಿಕ ನಿರೀಕ್ಷಕರು ನಡೆಸುವ ವೇಳೆ ಅನರ್ಹರು ಎಂದು ತಿಳಿದಾಕ್ಷಣ ಲೇಬರ್ ಕಾರ್ಡ್ ಹೊಂದಿದ್ದ ಕೂಲಿ ಕಾರ್ಮಿಕರು ಸ್ವಯಂಪ್ರೇರಿತವಾಗಿ ಅಧಿಕಾರಿಗಳಿಗೆ ಕಾರ್ಡನ್ನು ಮರಳಿಸಿದರು. ಹಿರಿಯ ಕಾರ್ಮಿಕ ನಿರೀಕ್ಷರಾದ ವಿಜಯ ಕುಮಾರ್ ಎಸ್ ಮಾತನಾಡಿ, 2022-23ನೇ ಸಾಲಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದಾಗಿ ದಾಖಲೆ ನೀಡಿ ಲೇಬರ್ ಕಾರ್ಡ್ ಅನ್ನು ಪಡೆದುಕೊಂಡು ಮಂಡಳಿಯಿಂದ ದೊರಕುವ ಮಕ್ಕಳ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕಿನ ಅರೇಹಳ್ಳಿ ಪಟ್ಟಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದಾಗ ವೇಳೆ ಇಬ್ಬರು ಅನರ್ಹರು ಸ್ವಯಂಪ್ರೇರಿತವಾಗಿ ಲೇಬರ್‌ಕಾರ್ಡ್ ಅನ್ನು ಇಲಾಖೆಗೆ ಮರಳಿಸಿದ್ದಾರೆ ಎಂದು ವಿವರಿಸಿದರು.ಹಲವು ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಲೇಬರ್ ಕಾರ್ಡ್ ಪಡೆದುಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ನಿರ್ಮಾಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆಲಸ ಕಾರ್ಯಗಳಗಳನ್ನು ಬಿಟ್ಟು ಬೇರೆ ಬೇರೆ ಇತರೆ ಉದ್ಯೋಗವನ್ನು ಮಾಡಲು ಪ್ರಾರಂಭಿಸುತ್ತಾರೆ. ಅಂತಹ ವರ್ಗದವರು ಲೇಬರ್ ಕಾರ್ಡ್ ರಿನಿವಲ್ ಮಾಡಿಕೊಳ್ಳದೆ ಇಲಾಖೆಗೆ ಹಿಂತಿರುಗಿಸಬೇಕು. ಈ ಹಿಂದೆ ಲೇಬರ್ ಕಾರ್ಡ್ 3 ವರ್ಷಕೊಮ್ಮೆ ರಿನಿವಲ್ ಮಾಡಿಕೊಳ್ಳಲು ಅವಕಾಶವಿತ್ತು, ಆದರೆ ಪ್ರಸ್ತುತ ಪ್ರತಿ ವರ್ಷಕೊಮ್ಮೆ ಅಗತ್ಯ ದಾಖಲೆ ನೀಡಿ ರಿನಿವಲ್ ಮಾಡಿಕೊಳ್ಳಬೇಕು. ಇದರಿಂದ ಅನರ್ಹರು ಲೇಬರ್ ಕಾರ್ಡ್ ಹೊಂದುವುದು ಅಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡದೇ ಇರುವವರು ಲೇಬರ್ ಕಾರ್ಡ್ ಪಡೆದುಕೊಳ್ಳುವುದು ಹಾಗೂ ಸೌಲಭ್ಯ ಪಡೆದುಕೊಳ್ಳುವುದು ನಿಯಮ ಬಾಹಿರ. ಅಲ್ಲದೆ ಲೇಬರ್ ಕಾರ್ಡ್ ಹೊಂದಿರುವವರು ಮಂಡಳಿಯಿಂದ ಯಾವುದೇ ಸೌಲಭ್ಯ ಪಡೆಯಲು ಪ್ರತಿ ವರ್ಷ ಕೆಲಸ ನಿರ್ವಹಿಸುವ ಸ್ಥಳದ ಬಗ್ಗೆ ಅಗತ್ಯ ದಾಖಲೆ ಸಲ್ಲಿಸಿ ಚಾಲ್ತಿಯಲ್ಲಿಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಅದೇ ರೀತಿ ಲೇಬರ್ ಕಾರ್ಡ್ ಮಾಡಿಸಿಕೊಳ್ಳದೆ ಇರುವ ಅರ್ಹ ಕಾರ್ಮಿಕರು ಸೂಕ್ತ ದಾಖಲಾತಿ ಸಲ್ಲಿಸಿ ಆನ್ಲೈನ್ ಮೂಲಕ ಲೇಬರ್ ಕಾರ್ಡ್ ಪಡೆದುಕೊಳ್ಳಬೇಕು ಮತ್ತು ಇಲಾಖೆಯಲ್ಲಿ ದೊರಕುವ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುವವರು ಅಪಘಾತಗಳಿಗೆ ಸಿಲುಕಿದಾಗ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಮುಂಜಿ ಸಮಾರಂಭಗಳಲ್ಲಿ ಅವರಿಗೆ ನೆರವಾಗಲೆಂದು ಕಾರ್ಮಿಕ ಇಲಾಖೆ ನೆರವು ನೀಡುತ್ತಿದೆ. ಈ ನೆರವು ನೀಡಲೆಂದೇ ಕಾರ್ಮಿಕ ಇಲಾಖೆ ಅರ್ಹರಿಗೆ ಲೇಬರ್ ಕಾರ್ಡ್ ನೀಡುತ್ತಿದೆ. ಆದರೆ, ಈ ಕಾರ್ಡನ್ನು ಸಾಕಷ್ಟು ಜನ ಅನರ್ಹರೂ ಪಡೆದುಕೊಂಡಿದ್ದಾರೆ ಎಂದು ಈ ಹಿಂದಿನಿಂದಲೂ ದೂರಿದೆ. ಯಾವುದೇ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡದವರು ಕೂಡ ಈ ಕಾರ್ಡ್ ಪಡೆದುಕೊಂಡಿದ್ದಾರೆ. ಈ ಮೂಲಕ ಅರ್ಹರಿಗೆ ತಲುಪಬೇಕಾದ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿರುವ ಬಗ್ಗೆ ಅರ್ಹರು ಸಾಕಷ್ಟು ಬಾರಿ ದೂರು ನೀಡಿದ್ದರು. ಹಾಗಾಗಿ ವಿಚಾರ ಇಲಾಖೆಯ ಗಮನಕ್ಕೂ ಬಂದಿತ್ತು. ಈ ನಿಟ್ಟಿನಲ್ಲಿ ಇಲಾಖೆ ಎಚ್ಚೆತ್ತುಕೊಂಡಿದ್ದು, ಅರ್ನಹರನ್ನು ಗುರ್ತಿಸುವ ಕೆಲಸಕ್ಕೆ ಮುಂದಾಗಿದೆ. ಈ ಕ್ರಮ ಕೆಲ ದಿನಗಳಿಗಷ್ಟೇ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು ಎಂದು ಬಹುತೇಕ ಅರ್ಹ ಕಾರ್ಮಿಕರು ಒತ್ತಾಯಿಸಿದ್ದಾರೆ.