ಮಂಗಳೂರು: ವಿಶ್ವಹಿಂದು ಪರಿಷತ್ ಸೇವಾ ಪ್ರಕಲ್ಪ ಗೋವನಿತಾಶ್ರಯ ಟ್ರಸ್ಟ್ ಪಜೀರು ಗೋಶಾಲೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜತ ಸಂಭ್ರಮ ಅಂಗವಾಗಿ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆಯ ಜಾಥಾ ಭಾನುವಾರ ನಡೆಯಿತು.ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಿಂದ ನೂರಕ್ಕೂ ಅಧಿಕ ವಾಹನಗಳಲ್ಲಿ ಬೈಹುಲ್ಲು, ಹಿಂಡಿ ಸಹಿತ ಗೋವಿಗೆ ಬೇಕಾದ ಅಗತ್ಯ ವಸ್ತುಗಳನ್ನು ಹೊರೆಕಾಣಿಕೆ ಮೂಲಕ ಕೊಂಡೊಯ್ದು ಪಜೀರಿನ ಗೋಶಾಲೆಗೆ ನೀಡಲಾಯಿತು.
ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಪ್ರಸ್ತುತ ಈ ಗೋಶಾಲೆಯಲ್ಲಿ 540ಕ್ಕೂ ಅಧಿಕ ಗೋವುಗಳಿದ್ದು, ಅವುಗಳ ಪಾಲನೆಗೆ ತಿಂಗಳಿಗೆ 15 ಲಕ್ಷ ರು. ವೆಚ್ಚವಾಗುತ್ತಿದೆ. ಗೋಶಾಲೆಯಿಂದ ಹಾಲು, ಸೆಗಣಿ, ಔಷಧಗಳ ಮೂಲಕ 5 ಲಕ್ಷ ರು. ಆದಾಯ ಸಿಗುತ್ತಿದೆ. ಉಳಿದ ಮೊತ್ತವನ್ನು ದಾನಿಗಳಿಂದ ಭರಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಜತ ಸಂಭ್ರಮ ವೇಳೆ 1 ಕೋಟಿ ರು. ಮೊತ್ತದ ಶಾಶ್ವತ ನಿಧಿ ಸ್ಥಾಪಿಸಿ ಅದರ ಬಡ್ಡಿಯಿಂದ ಗೋಶಾಲೆ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ದಾನಿಗಳು ನೆರವಾಗಬೇಕು ಎಂದರು.
ಕದ್ರಿ ದೇವಸ್ಥಾನದ ತಂತ್ರಿ ವೇದಮೂರ್ತಿ ವಿಠಲದಾಸ ತಂತ್ರಿ ಅವರು ಗೋವಿಗಾಗಿ ಹೊರೆಕಾಣಿಕೆ ಅರ್ಪಣೆಯ ಜಾಥಾಕ್ಕೆ ಚಾಲನೆ ನೀಡಿದರು. ವಿಹಿಂಪ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ರಾಜಸ್ಥಾನಿ ಸಮಾಜದ ಗೋಸೇವಾ ಪ್ರಮುಖರಾದ ಪ್ರಹ್ಲಾದ್, ಪ್ರಮುಖರಾದ ಶರಣ್ ಪಂಪ್‌ವೆಲ್, ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಮನೋಹರ ಸುವರ್ಣ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಮನೋಜ್‌ಕುಮಾರ್ ಕೋಡಿಕಲ್, ಕಿರಣ್ಕೋಡಿಕಲ್, ಸಮೀರ್ ಪುರಾಣಿಕ್, ಸುಧಾಕರ ರಾವ್ ಪೇಜಾವರ ಮತ್ತಿತರರು ಇದ್ದರು. ಶಿವಾನಂದ ಮೆಂಡನ್ ಸ್ವಾಗತಿಸಿ, ನಿರೂಪಿಸಿದರು.