ಕನ್ನಡಪ್ರಭ ವಾರ್ತೆ ಬೆಂಗಳೂರು
ಶ್ರೀಮಂತ ಸಂಸ್ಕೃತಿ ಹೊಂದಿರುವ ಭಾರತ ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ನಮ್ಮ ಸಂಸ್ಕೃತಿ, ಧರ್ಮ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಕರೆ ನೀಡಿದರು.ಅರಮನೆ ಮೈದಾನದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠ ಮತ್ತು ವೇದಾಂತ ಭಾರತಿ ಶನಿವಾರ ಆಯೋಜಿಸಿದ್ದ ಶ್ರೀ ಶೃಂಗೇರಿ ಶಾರದಾ ಪೀಠಾಧ್ಯಕ್ಷ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನಕರ್ ಮಾತನಾಡಿದರು.
ಹಿಂದೂ ಸಂಸ್ಕೃತಿ ಎಲ್ಲವನ್ನೂ ಒಳಗೊಂಡಿದೆ. ಮನುಷ್ಯರ ಸಂತಸದ ಮೂಲ ಸಂಪತ್ತಲ್ಲ. ಬದಲಿಗೆ ಸತ್ಯ ಮಾರ್ಗದಲ್ಲಿ ನಡೆಯುವುದರಿಂದ ನೈಜ ಸಂತೋಷ ಸಿಗುತ್ತದೆ. ಪೆನ್, ಪೆನ್‌ಡ್ರೈವ್ ಇಲ್ಲದ ಕಾಲದಲ್ಲಿಯೂ ವೇದ ಮಂತ್ರಗಳನ್ನು ಉಳಿಸಿಕೊಂಡು ಬರಲಾಗಿದೆ. ಇದು ನಮ್ಮ ಪೂರ್ವಿಕರ ಧೀಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.ಶ್ರೀಮಂತ ಸಂಸ್ಕೃತಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಅದನ್ನು ನಿರ್ಲಕ್ಷಿಸಬಾರದು. ನಮಗೆ ಸೈನಿಕರು ಬೇಕಿಲ್ಲ, ಕಟ್ಟಡ ನಾಶ ಮಾಡುವ ಅಗತ್ಯವಿಲ್ಲ. ಆದರೆ, ಸಂಸ್ಕೃತಿ ನಾಶಕ್ಕೆ ಅವಕಾಶ ನೀಡದಂತೆ ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಅಲ್ಲದೆ, ಭಾರತ ಇಂದು ಜಗತ್ತಿನ ನಾಯಕತ್ವ ವಹಿಸುತ್ತಿದ್ದು, ನಮ್ಮ ಗತವೈಭವ ಮತ್ತೆ ಮರುಕಳಿಸುತ್ತಿದೆ ಎಂದು ಹೇಳಿದರು.
ಭಾರತೀ ಶ್ರೀಗಳಿಂದ ಧರ್ಮ ಉಳಿಸುವ ಕೆಲಸ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮ ನಾವು ಮಾಡುವ ಪ್ರಯತ್ನಗಳಿಗೆ ಸೋಲಾಗಬಹುದು. ಆದರೆ, ನಮ್ಮ ಪ್ರಾರ್ಥನೆ ನಿಷ್ಪಲವಾಗುವುದಿಲ್ಲ. ಹಾಗೆಯೇ, ಧರ್ಮ ಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮಠಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ. ಪ್ರಪಂಚದಲ್ಲಿ ಧರ್ಮ ಯಾವುದಾದರೂ ಅವುಗಳ ತತ್ವ ಒಂದೇ ಎಂದು ಅಭಿಪ್ರಾಯಪಟ್ಟರು.ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ, ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಇತರರಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂದೇಶ: ಶ್ರೀ ಶೃಂಗೇರಿ ಶಾರದಾಪೀಠಾಧ್ಯಕ್ಷ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮೀಜಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕಳುಹಿಸಿದ್ದರು. ಧಾರ್ಮಿಕತೆ ಮತ್ತು ಧರ್ಮ ರಕ್ಷಣೆಯಲ್ಲಿ ಶ್ರೀಗಳ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ನಮಃ ಶಿವಾಯ ಸ್ತೋತ್ರ: ಕಾರ್ಯಕ್ರಮದಲ್ಲಿ 1.5 ಲಕ್ಷಕ್ಕೂ ಹೆಚ್ಚಿನ ಜನರು ಏಕಕಾಲಕ್ಕೆ ನಮಃ ಶಿವಾಯ ಸ್ತೋತ್ರ ಪಾರಾಯಣ ಮಾಡಿದರು. ಇದು ದಾಖಲೆಯಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಯಿತು. ಅದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡವು ವಿಧುಶೇಖರ ಭಾರತೀ ಶ್ರೀಗಳಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.