ಎತ್ತಿನಹೊಳೆ ಯೋನೆಯ ಪರಿಹಾರ ಹಣಕ್ಕೆ ಸಂತ್ರಸ್ತ ರವೀಂದ್ರ ಮನವಿ

KannadaprabhaNewsNetwork | Published : Jan 17, 2024 1:48 AM

ಸಾರಾಂಶ

ಎತ್ತಿನಹೊಳೆ ಯೋಜನೆಗೆ ಶಿವಯ್ಯನವರ ಮನೆ ಮುಳುಗಡೆಯಾಗಿದ್ದು, ಪರಿಹಾರದ ಹಣ ನಮಗೆ ನೀಡದೇ ಬೇರೆಯವರಿಗೆ ಹಾಕಲಾಗಿದ್ದು, ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ಪರಿಹಾರದ ಹಣ ನೀಡುವಂತೆ ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ ಮತ್ತು ಕುಟುಂಬದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ತಿರುಮಲನಹಳ್ಳಿಯ ರವೀಂದ್ರ, ಕುಟುಂಬ ಡಿಸಿ ಕಚೇರಿ ಮುಂದೆ ಧರಣಿ

ಕನ್ನಡಪ್ರಭ ವಾರ್ತೆ ಹಾಸನ

ಎತ್ತಿನಹೊಳೆ ಯೋಜನೆಗೆ ಶಿವಯ್ಯನವರ ಮನೆ ಮುಳುಗಡೆಯಾಗಿದ್ದು, ಪರಿಹಾರದ ಹಣ ನಮಗೆ ನೀಡದೇ ಬೇರೆಯವರಿಗೆ ಹಾಕಲಾಗಿದ್ದು, ಈ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ಪರಿಹಾರದ ಹಣ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ ಮತ್ತು ಕುಟುಂಬದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಎಸ್. ಅಂಬರೀಷ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ತಿರುಮಲನಹಳ್ಳಿ ಗ್ರಾಮದ ಸರ್ವೆ ನಂಬರ್-೩೫, ಖಾತೆದಾರರ ಹೆಸರು ರಂಗಮ್ಮ ಕೋಂ. ಟಿ.ರಾಮಯ್ಯ, ಈ ಜಮೀನು ಅವಿಭಕ್ತ ಕುಟುಂಬದ ಆಸ್ತಿಯಾಗಿದ್ದು, ಈ ಜಮೀನಿನಲ್ಲಿ ಟಿ.ರಾಮಯ್ಯನ ತಮ್ಮಂದಿರಾದ ಶಿವಯ್ಯ ಬಿನ್ ರಾಮಯ್ಯ, ಚೆನ್ನಪ್ಪ ಬಿನ್ ರಾಮಯ್ಯ, ಚೆನ್ನಬಸವಯ್ಯ ಬಿನ್ ರಾಮಯ್ಯ, ಮೋಹನದಾಸ್ ಬಿನ್ ರಾಮಯ್ಯ ಇದೇ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಈ ಜಮೀನಿನ ತಕರಾರು ಅರ್ಜಿ ಹಾಸನದ ನ್ಯಾಯಾಲಯದಲ್ಲಿ ನೆಡೆಯುತ್ತಿರುತ್ತದೆ. ಇನ್ನು ಇತ್ಯರ್ಥವಾಗಿರುವುದಿಲ್ಲ. ಈ ನಡುವೆ ಎತ್ತಿನಹೊಳೆ ಕುಡಿಯುವ ನೀರಿನ ಕಾಮಗಾರಿಗಾಗಿ ೫ ಎಕರೆ ೨೪ ಗುಂಟೆಯನ್ನು ವಿಶೇಷ ಭೂ-ಸ್ವಾಧೀನ ಅಧಿಕಾರಿಗಳು ಎತ್ತಿನ ಹೊಳೆ ಯೋಜನೆಯವರು ಭೂ-ಸ್ವಾಧೀನ ಪಡಿಸಿಕೊಂಡಿರುತ್ತಾರೆ ಎಂದು ದೂರಿದರು.

ಈ ವಿಚಾರವಾಗಿ ವಿಶೇಷ ಭೂ-ಸ್ವಾಧೀನ ಅಧಿಕಾರಿ ಕಚೇರಿಗೆ ಭೇಟಿ ನೀಡಿದಾಗ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಪಿ.ಡಬ್ಲ್ಯುಪಿ ಮತ್ತು ಐ.ಡಬ್ಲೂ.ಟಿ.ಡಿ ಸಬ್ ಡಿವಿಸನ್, ಬೇಲೂರು ಮತ್ತು ಎತ್ತಿನಹೊಳೆ ಯೋಜನೆ ಎಂಜಿನಿಯರ್ ಎ.ಡಬ್ಲೂ.ಇ ಪ್ರಕಾಶ್ ಹಾಗೂ ಈರಯ್ಯರ ಉದ್ದೇಶಪೂರ್ವಕ ಕುತಂತ್ರದಿಂದಾಗಿ ಶಿವಯ್ಯನವರ ಮನೆಯ ಪರಿಹಾರದ ಹಣವನ್ನು ಚೆನ್ನಬಸಯ್ಯನವರ ಮನೆಗೆ ಹಾಕಿರುತ್ತಾರೆ. ಈ ವಿಷಯವನ್ನು ಎತ್ತಿನಹೊಳೆ ಎಂಜಿನಿಯರ್‌ಗಳಾದ ಮತ್ತು ಎ.ಡಬ್ಲೂ.ಇ ಪ್ರಕಾಶ್‌ರವರನ್ನು ವಿಚಾರಿಸಿದಾಗ ಈ ವಿಷಯವನ್ನು ಇಲ್ಲಿಯೇ ಬಿಟ್ಟು ಬಿಡಿ. ಇಲಾಖೆಯನ್ನು ಎದುರು ಹಾಕಿಕೊಂಡರೆ ನೀವು ಇರುವ ಮನೆಯೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಶಿವಯ್ಯನವರ ಮನೆಯ ಪರಿಹಾರದ ಹಣವನ್ನು ಬೇರೆಯವರ ಮನೆಗೆ ಹಾಕಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಮತ್ತು ಶಿವಯ್ಯನವರ ಮನೆಗೆ ರಿ-ಎಸ್ಟಿಮೇಟ್ ಮಾಡಿಸಿ ಪರಿಹಾರದ ಹಣವನ್ನು ಕೋರ್ಟಿಗೆ ಜಮಾ ಮಾಡಬೇಕೆಂದು ತಮ್ಮಲ್ಲಿ ಪ್ರಾರ್ಥನೆ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ, ಹೇಮಾಲತಾ, ನಂದಿನಿ ಇತರರು ಉಪಸ್ಥಿತರಿದ್ದರು.ಪರಿಹಾರದ ಹಣಕ್ಕಾಗಿ ಡಿಸಿ ಕಚೇರಿ ಮುಂದೆ ಕುಳಿತು ಮನವಿ ಮಾಡಿದ ತಿರುಮಲನಹಳ್ಳಿ ಗ್ರಾಮದ ಟಿ.ಎಸ್. ರವೀಂದ್ರ ಮತ್ತು ಕುಟುಂಬದವರು.

Share this article